ಮುಂಬೈ : ಭಾರತ vs ದಕ್ಷಿಣ ಆಫ್ರಿಕಾ ನವೆಂಬರ್ 30 ರಿಂದ ಪ್ರಾರಂಭವಾಗುವ ಮುಂಬರುವ ಏಕದಿನ ಸರಣಿಯಲ್ಲಿ ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಭಾರತವನ್ನು ಮುನ್ನಡೆಸಲಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಕೆಎಲ್ ರಾಹುಲ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದ್ದು ತಂಡದಲ್ಲಿ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

12 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿರುವ ರಾಹುಲ್, ನಿಯಮಿತ ನಾಯಕ ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ತಿಂಗಳ ಆರಂಭದಲ್ಲಿ ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ಸಮಯದಲ್ಲಿ ಕುತ್ತಿಗೆಗೆ ಗಾಯವಾದ ನಂತರ ಗಿಲ್ ಸರಣಿಯಿಂದ ಹೊರಗುಳಿದಿದ್ದರು.ಗುವಾಹಟಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಅವರು ಅಲಭ್ಯರಾಗಿದ್ದಾರೆ.
ರೋಹಿತ್ ಶರ್ಮಾ ತಾತ್ಕಾಲಿಕ ನಾಯಕರಾಗಿ ಕಾರ್ಯನಿರ್ವಹಿಸಲು ಲಭ್ಯವಿದ್ದರೂ, ಅಜಿತ್ ಅಗರ್ಕರ್ ಅಧ್ಯಕ್ಷತೆಯ ಹಿರಿಯ ಆಯ್ಕೆ ಸಮಿತಿಯು ರಾಹುಲ್ ಅವರಿಗೆ ನಾಯಕತ್ವವನ್ನು ವಹಿಸಲು ನಿರ್ಧರಿಸಿತು. ಚಾಂಪಿಯನ್ಸ್ ಟ್ರೋಫಿಯವರೆಗೆ ರೋಹಿತ್ ಭಾರತವನ್ನು ಮುನ್ನಡೆಸಿದರು,ನಂತರ ಮ್ಯಾನೇಜ್ಮೆಂಟ್ ಗಿಲ್ ಅವರನ್ನು ಆ ಸ್ಥಾನಕ್ಕೆ ಬಡ್ತಿ ನೀಡಿತು.

ಮೊದಲ ಏಕದಿನ ಪಂದ್ಯ ನವೆಂಬರ್ 30 ರಂದು ರಾಂಚಿಯಲ್ಲಿ ನಡೆಯಲಿದ್ದು, ನಂತರ ಡಿಸೆಂಬರ್ 3 ರಂದು ರಾಯ್ಪುರ ಹಾಗೂ 6 ರಂದು ವಿಶಾಖಪಟ್ಟಣಂನಲ್ಲಿ ಪಂದ್ಯಗಳು ನಡೆಯಲಿವೆ. ಏಕದಿನ ಪಂದ್ಯಗಳ ನಂತರ, ಭಾರತ ಡಿಸೆಂಬರ್ 9 ರಿಂದ 19 ರವರೆಗೆ ಐದು ಟಿ20 ಪಂದ್ಯಗಳನ್ನು ಆಡಲಿದೆ.

