ಮುಂಬೈ : ಬಾಲಿವುಡ್ ದಂತಕಥೆ ಧರ್ಮೇಂದ್ರ (89) ಅವರು ಇಂದು ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾದರು. ಧರ್ಮೇಂದ್ರ ಅವರು ಕೆಲವು ಸಮಯದಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.

ನವೆಂಬರ್ 10 ರಂದು ಉಸಿರಾಟದ ತೊಂದರೆ ಕಾಣಿಸಿಕೊಂಡು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಮಯದಲ್ಲಿ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು.ನಂತರ ನವೆಂಬರ್ 12 ರಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಮತ್ತು ವೈದ್ಯರು ಮನೆಯಲ್ಲಿಯೇ ಚಿಕಿತ್ಸೆಯನ್ನು ಮುಂದುವರಿಸಲು ಸಲಹೆ ನೀಡಿದರು.

ಧರ್ಮೇಂದ್ರ ಅವರನ್ನು ಬಾಲಿವುಡ್ನ ಸಾರ್ವಕಾಲಿಕ ಅತ್ಯುತ್ತಮ ನಟರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.ಆರು ದಶಕಗಳ ಕಾಲ ಬಾಲಿವುಡ್ ಅನ್ನು ರೋಮಾಂಚನ ಗೊಳಿಸಿದ ಧರ್ಮೇಂದ್ರ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಹಲವು ಸೂಪರ್ ಹಿಟ್ ಆಗಿದ್ದವು. ದೇಶವು ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅವರು 2009 ರಲ್ಲಿ ರಾಜಸ್ಥಾನದಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯರಾಗಿದ್ದರು.

ಅವರು 1960 ರಲ್ಲಿ ‘ದಿಲ್ ಭಿ ತೇರಾ, ಹಮ್ ಭಿ ತೇರಾ’ ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಶೋಲೆ, ಧರ್ಮವೀರ್, ಚುಪ್ಕೆ ಚುಪ್ಕೆ ಮತ್ತು ಡ್ರೀಮ್ ಗರ್ಲ್ ನಂತಹ ಚಿತ್ರಗಳು ಧರ್ಮೇಂದ್ರ ಅವರನ್ನು ಪ್ರಸಿದ್ಧಿಯನ್ನಾಗಿ ಮಾಡಿದವು. ಧರ್ಮೇಂದ್ರ ಅವರ ಕೊನೆಯ ಚಿತ್ರ ‘ಇಕ್ಕಿಸ್’ ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ.

ಧರ್ಮೇಂದ್ರ ನಟಿ ಹೇಮಾ ಮಾಲಿನಿಯನ್ನು ವಿವಾಹವಾದರು. ಪ್ರಕಾಶ್ ಕೌರ್ ಅವರ ಮೊದಲ ಪತ್ನಿ. ಅವರಿಗೆ ಬಾಲಿವುಡ್ ತಾರೆಗಳಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಮತ್ತು ಇಶಾ ಡಿಯೋಲ್,ಆಹಾನಾ ಡಿಯೋಲ್ ಸೇರಿದಂತೆ 6 ಮಕ್ಕಳು

ಅವರ ಅಂತ್ಯಕ್ರಿಯೆಯನ್ನು ಪವನ್ ಹ್ಯಾನ್ಸ್ ಸ್ಮಶಾನದಲ್ಲಿ ನಡೆಸಲಾಯಿತು. ಈ ವರ್ಷ ಡಿಸೆಂಬರ್ 8 ರಂದು ಧರ್ಮೇಂದ್ರ 90 ವರ್ಷ ತುಂಬುತ್ತಿದ್ದರು.


