ಧಾರವಾಡ : ಕಿರಾಣಾ ಘರಾಣಾ ಗಾಯನ ಶೈಲಿಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹೆಸರಾಂತ ಗಾಯಕರಾದ ಪದ್ಮಭೂಷಣ ಪಂಡಿತ ಬಸವರಾಜ ರಾಜಗುರು ಅವರ ಮೇರು ಶಿಷ್ಯರಲ್ಲಿ ಒಬ್ಬರಾಗಿದ್ದ ಷಣ್ಮುಖಾನಂದ ಗೊಜನೂರ ಅವರು ಕೋಮಲ ಕಂಠದ ಗಾಯಕರಾಗಿ ಗಮನಸೆಳೆದಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ತನಿಖಾಧಿಕಾರಿ ಮಹಾಂತೇಶ ಗುಡಿಹಾಳ ಹೇಳಿದರು.
ಅವರು ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಆಯುಕ್ತರ ಕಚೇರಿಗೆ ಸಂಲಗ್ನಗೊಂಡಿರುವ ಡಾ. ಎಚ್. ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ, ಶಹರ ವಲಯದ ಬಿಇಓ ಕಚೇರಿ, ನಗರದ ಶ್ರೀಸಿದ್ಧರಾಮೇಶ್ವರ ಬಿ.ಇಡಿ. ಕಾಲೇಜು ಸಂಯುಕ್ತ ಆಶ್ರಯದಲ್ಲಿ ಹಿಂದೂಸ್ತಾನಿ ಗಾಯಕರಾಗಿದ್ದ ಷಣ್ಮುಖಾನಂದ ಗೊಜನೂರ ಸ್ಮರಣಾರ್ಥ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಬಿ.ಇಡಿ. ಕಾಲೇಜಿನ ಮಜ್ಜಿಗೆ ಪಂಚಪ್ಪ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ಗೀತ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ನಾಡಿನ ವಿವಿಧ ಕ್ಷೇತ್ರಗಳ ಉನ್ನತ ವ್ಯಕ್ತಿತ್ವಗಳ ಆದರ್ಶಗಳನ್ನು ಅರಿತು ಒಂದು ಮಹೋನ್ನತ ಗುರಿ ಸಾಧನೆಗೆ ವಿದ್ಯಾರ್ಥಿಗಳು ಆಸಕ್ತಿಯ ಅಧ್ಯಯನ ಮಾಡಬೇಕು ಎಂದರು.
ಶ್ರೀಸಿದ್ಧರಾಮೇಶ್ವರ ಬಿ.ಇಡಿ. ಕಾಲೇಜಿನ ಪ್ರಿನ್ಸಿಪಾಲ್ ಡಾ. ಗಿರಿಜಾ ಹಿರೇಮಠ ಅಧ್ಯಕ್ಷತೆವಹಿಸಿದ್ದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 20 ಪ್ರೌಢಶಾಲೆಗಳ 40 ವಿದ್ಯಾರ್ಥಿಗಳು ತಮ್ಮ ಗೀತ ಗಾಯನ ಪ್ರಸ್ತುತಪಡಿಸಿದರು. ಸಂಗೀತ ಉಪನ್ಯಾಸಕಿ ಡಾ. ಅರ್ಚನಾ ಸುತಾರ, ಸಂಪನ್ಮೂಲ ವ್ಯಕ್ತಿ ಅರುಂಧತಿ ಸವದತ್ತಿ ಹಾಗೂ ಡಯಟ್ನ ರೋಹಿಣಿ ದಾನಿ ತೀರ್ಪುಗಾರರಾಗಿ ಪಾಲ್ಗೊಂಡು ಫಲಿತಾಂಶ ಪ್ರಕಟಿಸಿದರು. ವಿಜೇತ ಮಕ್ಕಳಿಗೆ ಪುಸ್ತಕ ಬಹುಮಾನ ನೀಡಲಾಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ಪ್ರಮಾಣಪತ್ರ ನೀಡಿ ಪ್ರೊತ್ಸಾಹಿಸಲಾಯಿತು.
ದತ್ತಿ ದಾನಿಗಳಾದ ಅನ್ನಪೂರ್ಣ ಗೊಜನೂರ, ವಿನಯಾ ಗೊಜನೂರ, ಬಿ.ಇಡಿ. ಕಾಲೇಜಿನ ಡಾ.ಕೆ.ಆರ್.ಹೀರೆಮಠ, ಗಂಗಾಧರ ಜೋಗಿ, ಜ್ಯೋತಿ ಬಾಳಗಿ, ಹುಸೇನ್ ಪಟೇಲ್, ಅನ್ನದಾನೇಶ್ವರಿ ಕೊಟೂರು, ಡಾ.ಎಚ್.ಎಫ್.ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನದ ಜಯಶ್ರೀ ವಡವಡಗಿ ಇತರರು ಇದ್ದರು. ಆರಂಭದಲ್ಲಿ ಗಾಯಕ ಷಣ್ಮುಖಾನಂದ ಗೊಜನೂರ ಅವರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಲಾಯಿತು.

