ಬ್ಯಾಂಕಾಕ್ನ ಹೊರವಲಯದಲ್ಲಿರುವ ನೋಂಥಬುರಿಯಲ್ಲಿರುವ ದೇವಾಲಯವೊಂದರಲ್ಲಿ, ಅಂತ್ಯಕ್ರಿಯೆಯ ವಿಧಿವಿಧಾನಗಳು ಪ್ರಾರಂಭವಾಗುವ ಸ್ವಲ್ಪ ಸಮಯದ ಮೊದಲು ಥಾಯ್ ಮಹಿಳೆಯೊಬ್ಬರು ಶವಪೆಟ್ಟಿಗೆಯಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ.

ಭಾನುವಾರ ದೇಹವನ್ನು ಅಂತ್ಯಕ್ರಿಯೆಯ ವಿಧಿ ವಿಧಾನಕ್ಕೆ ಸಿದ್ಧಪಡಿಸುವಾಗ ದೇವಾಲಯದ ನೌಕರರು ಶವಪೆಟ್ಟಿಗೆಯ ಒಳಗಿನಿಂದ ಬಡಿಯುತ್ತಿರುವ ಶಬ್ದವನ್ನು ಗಮನಿಸಿದರು.ಈ ಘಟನೆಯು ಬ್ಯಾಂಕಾಕ್ನ ಹೊರವಲಯದಲ್ಲಿರುವ ನೋಂಥಬುರಿಯಲ್ಲಿರುವ ದೇವಾಲಯವೊಂದರಲ್ಲಿ ನಡೆದಿದೆ .ಅಂತ್ಯಕ್ರಿಯೆಯ ವಿಧಿವಿಧಾನಗಳು ಪ್ರಾರಂಭವಾಗುವ ಸ್ವಲ್ಪ ಸಮಯದ ಮೊದಲು 65 ವರ್ಷದ ಥಾಯ್ ಮಹಿಳೆಯೊಬ್ಬರು ತಮ್ಮ ಶವಪೆಟ್ಟಿಗೆಯಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ.
ದೇವಾಲಯದ ಸಿಬ್ಬಂದಿ ಶವಪೆಟ್ಟಿಗೆಯನ್ನು ತೆರೆದಾಗ ಮಹಿಳೆ ಉಸಿರಾಡುತ್ತಾ ಅದರ ಮರದ ಒಳಭಾಗವನ್ನು ನಿಧಾನವಾಗಿ ಬಡಿಯುತ್ತಿದ್ದಳು.ಮಠಾಧೀಶರು ಅವಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಆದೇಶಿಸಿದರು ಮತ್ತು ತಕ್ಷಣವೇ ಕಾರ್ಯವಿಧಾನವನ್ನು ನಿಲ್ಲಿಸಿದರು. ಆ ಮಹಿಳೆಯನ್ನು ಚೊಂತಿರತ್ ಸಕುಲ್ಕು ಎಂದು ಗುರುತಿಸಲಾಗಿದೆ. ಅವರು ಸುಮಾರು 2 ವರ್ಷಗಳಿಂದ ಹಾಸಿಗೆ ಹಿಡಿದಿದ್ದರು ಮತ್ತು ಆ ಸಮಯದಲ್ಲಿ ಅವರ ಆರೋಗ್ಯವು ಸ್ಥಿರವಾಗಿ ಕ್ಷೀಣಿಸುತ್ತಿತ್ತು ಎಂದು ಅವರ ಸಹೋದರ ಮೊಂಗ್ಕೋಲ್ ಸಕುಲ್ಕು ಹೇಳಿದರು.
“ನಾನು ನನ್ನ ಸಹೋದರಿಯನ್ನು ಮೂರು ವರ್ಷಗಳಿಂದ ನೋಡಿಕೊಳ್ಳುತ್ತಿದ್ದೇನೆ. ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ನಮಗೆ ತಿಳಿಸಿದರು. ಆದ್ದರಿಂದ ನಾವು ಅವರನ್ನು ಶವಪೆಟ್ಟಿಗೆಯಲ್ಲಿ ಇರಿಸಿ ದಹನಕ್ಕಾಗಿ 500 ಕಿ.ಮೀ ದೂರದಲ್ಲಿರುವ ಬ್ಯಾಂಕಾಕ್ ನ ದೇವಾಲಯಕ್ಕೆ ತಂದಿದ್ದೇವೆ” ಎಂದು ಮೊಂಗ್ಕೋಲ್ ತಿಳಿಸಿದರು.
ಮರಣ ಪ್ರಮಾಣಪತ್ರದ ಪ್ರಮಾದ

ಆಕೆಯ ಸಹೋದರ ಮೊಂಗ್ಕೋಲ್ ಅವರ ಪ್ರಕಾರ, ಕಳೆದ ಶನಿವಾರ ಫಿಟ್ಸಾನುಲೋಕ್ ಗ್ರಾಮದ ತಮ್ಮ ಮನೆಯಲ್ಲಿ ಸಹೋದರಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಾಗ ಸಂಬಂಧಿಕರು ಮತ್ತು ಗ್ರಾಮ ಅಧಿಕಾರಿಗಳು ಆಕೆ ಮೃತಪಟ್ಟಿದ್ದಾರೆಂದು ಭಾವಿಸಿದ್ದರು.
ಗ್ರಾಮದ ಮುಖ್ಯಸ್ಥರು ಶವಪೆಟ್ಟಿಗೆಯನ್ನು ದಾನ ಮಾಡಲು ಅಗತ್ಯವಿರುವ ದಾಖಲೆಗಳಿಗೆ ಸಹಿ ಹಾಕುತ್ತಾರೆ, ಇದು ಆ ಪ್ರದೇಶದಲ್ಲಿ ಒಂದು ಆಚರಣೆಯಾಗಿದ್ದು, ಕುಟುಂಬಗಳು ದತ್ತಿ ಸಂಸ್ಥೆಗಳಿಂದ ಶವಪೆಟ್ಟಿಗೆಯನ್ನು ತೆಗೆದುಕೊಳ್ಳಲು ಅನುಮತಿಸುತ್ತದೆ, ಆಕೆಯ ಕುಟುಂಬಸ್ಥರು ದೇಹವನ್ನು ದಾನ ಮಾಡಲು ನಿರ್ಧರಿಸಿದರು.ಆದರೆ ದಾಖಲೆಗಳು ಅಧಿಕೃತ ಮರಣ ಪ್ರಮಾಣ ಪತ್ರದಂತೆಯೇ ಇರಲಿಲ್ಲ, ಆಸ್ಪತ್ರೆಯು ಅಂಗಾಂಗ ದಾನಕ್ಕಾಗಿ ದೇಹವನ್ನು ಸ್ವೀಕರಿಸುವ ಮೊದಲು ಅಥವಾ ಯಾವುದೇ ಕಾನೂನು ಕಾರ್ಯಾಚರಣೆಗಳನ್ನು ಮಾಡುವ ಮೊದಲು ಥಾಯ್ ಕಾನೂನಿನ ಪ್ರಕಾರ ಇದು ಅಗತ್ಯವಾಗಿರುತ್ತದೆ.
ಅಧಿಕೃತ ಪ್ರಮಾಣಪತ್ರ ಪಡೆಯಲು ಪ್ರಯತ್ನಿಸಿದೆ ಎಂದು ಮೊಂಗ್ಕೋಲ್ ಹೇಳಿದರು, ಆದರೆ ಯಾವುದೇ ವೈದ್ಯರು ಆಕೆ ಮೃತಪಟ್ಟಿದ್ದಾರೆಂದು ಘೋಷಿಸದ ಕಾರಣ ಆಸ್ಪತ್ರೆಯು ಶವವನ್ನು ಸ್ವೀಕರಿಸಲು ನಿರಾಕರಿಸಿತು. ಇದಲ್ಲದೆ, ಪ್ರಕ್ರಿಯೆಯನ್ನು ವಿಳಂಬ ಮಾಡುವುದರಿಂದ ದೇಹವು ಕೊಳೆಯುವ ಸಾಧ್ಯತೆ ಇತ್ತು. ಬದಲಿಗೆ ಅವರು ತಮ್ಮ ಸಹೋದರಿಯನ್ನು ಉಚಿತ ಅಂತ್ಯಕ್ರಿಯೆ ಸೇವೆಗಳನ್ನು ಒದಗಿಸುವ ದೂರದ ಬ್ಯಾಂಕಾಕ್ ನಲ್ಲಿರುವ ವಾಟ್ ರ್ಯಾಟ್ ಪ್ರಕೊಂಗ್ಥಮ್ಗೆ ಕರೆದೊಯ್ಯಲು ನಿರ್ಧರಿಸಿದರು.
ದೇವಾಲಯದ ಖಜಾಂಚಿ ಪೈರತ್ ಸುದ್ತುಪ್ ಅವರ ಪ್ರಕಾರ, ಅಂತ್ಯಕ್ರಿಯೆ ಮುಂದುವರಿಯುವ ಮೊದಲು ಅಧಿಕೃತ ಮರಣ ಪ್ರಮಾಣಪತ್ರದ ಅಗತ್ಯವಿದೆ ಎಂದು ಸಿಬ್ಬಂದಿ ಕುಟುಂಬಕ್ಕೆ ವಿವರಿಸುತ್ತಿದ್ದರು. ಅವರು ಮಾತನಾಡುತ್ತಿದ್ದಂತೆ, ಶವಪೆಟ್ಟಿಗೆಯಿಂದ ಬಡಿದ ಶಬ್ದ ಕೇಳಿ ಬಂದಿತು.”ನನಗೆ ಸ್ವಲ್ಪ ಆಶ್ಚರ್ಯವಾಯಿತು, ಆದ್ದರಿಂದ ನಾನು ಅವರನ್ನು ಶವಪೆಟ್ಟಿಗೆಯನ್ನು ತೆರೆಯಲು ಕೇಳಿದೆ, ಮತ್ತು ಎಲ್ಲರೂ ಗಾಬರಿಗೊಂಡರು. ಅವಳು ಸ್ವಲ್ಪ ಕಣ್ಣು ತೆರೆದು ಶವಪೆಟ್ಟಿಗೆಯ ಬದಿಯಲ್ಲಿ ಬಡಿದುಕೊಳ್ಳುವುದನ್ನು ನಾನು ನೋಡಿದೆ. ಅವಳು ಬಹಳ ಸಮಯದಿಂದ ಬಡಿದುಕೊಂಡಿರಬೇಕು” ಪೈರತ್ ಸುದ್ತುಪ್ ಹೇಳಿದರು.
ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದೆ ಮತ್ತು ಚಿಕಿತ್ಸೆಗೆ ಬೇಕಾದ ಖರ್ಚು ವೆಚ್ಚವನ್ನು ದೇವಾಲಯವೇ ಬರಿಸುವುದಾಗಿ ಹೇಳಿದರು. ಆಕೆ ಈಗ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದು ಈಗ ಅವರು ಚೆನ್ನಾಗಿದ್ದಾರೆ ಎಂದು ಖಜಾಂಚಿ ಪೈರತ್ ಸುದ್ತುಪ್ ಹೇಳಿದರು.

