ಮುಂಬೈನ ದೇವಸ್ಥಾನವೊಂದರಲ್ಲಿ ಕಾಳಿ ದೇವಿಯ ವಿಗ್ರಹವನ್ನು ಮಾತೆ ಮೇರಿಯನ್ನು ಹೋಲುವಂತೆ ಅಲಂಕರಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಅರ್ಚಕನನ್ನು ಬಂಧಿಸಲಾಗಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಾಶಿ ನಾಕಾದಲ್ಲಿರುವ ಅನಿಕ್ ಗ್ರಾಮದ ಹಿಂದೂ ಸ್ಮಶಾನದ ಒಳಗಿರುವ ಕಾಳಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಕಾಳಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು, ಗರ್ಭಗುಡಿಯೊಳಗಿನ ಕಾಳಿ ದೇವಿಯ ವಿಗ್ರಹಕ್ಕೆ ಮಾತೆ ಮೇರಿಯ ಬಟ್ಟೆಯನ್ನು ಹೋಲುವ ಬಟ್ಟೆಯನ್ನು ಅಲಂಕಾರಿಸಿದ್ದನ್ನು ಕಂಡು ದಿಗ್ಭ್ರಮೆಗೊಂಡು ತಕ್ಷಣವೇ ದೇವಾಲಯದ ಅರ್ಚಕರನ್ನು ಸ್ಥಳೀಯ ಭಕ್ತಾದಿಗಳು ಪ್ರಶ್ನಿಸಿದಾಗ ಕಾಳಿಮಾತೆ ತನ್ನ ಕನಸಿನಲ್ಲಿ ಕಾಣಿಸಿಕೊಂಡಿದ್ದಾಳೆ ಮತ್ತು ಅವಳನ್ನು ಮಾತೆ ಮೇರಿಯ ರೂಪದಲ್ಲಿ ಅಲಂಕರಿಸಲು ಸೂಚಿಸಿದ್ದಾಳೆ ಎಂದು ಅರ್ಚಕ ರಮೇಶ್ ಹೇಳಿಕೊಂಡರು.

ಈ ವಿವರಣೆಯು ಅನೇಕ ಭಕ್ತರು ಮತ್ತು ಸ್ಥಳೀಯ ಧಾರ್ಮಿಕ ಸಂಸ್ಥೆಗಳ ಸದಸ್ಯರನ್ನು ತೃಪ್ತಿಪಡಿಸಲಿಲ್ಲ.ಈ ಕೃತ್ಯವನ್ನು ನಡೆಸಲು ಅರ್ಚಕನ ಮೇಲೆ ಅಪರಿಚಿತ ವ್ಯಕ್ತಿಗಳು ಪ್ರಭಾವ ಬೀರಿರಬಹುದು ಅಥವಾ ಹಣ ನೀಡಿರಬಹುದು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸ್ಥಳೀಯ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸೇರಿದಂತೆ ಬಲಪಂಥೀಯ ಗುಂಪುಗಳು ಘಟನೆಯನ್ನು ಖಂಡಿಸಿದರು. ಸ್ವಲ್ಪ ಸಮಯ ಪರಿಸರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಲಿಸರು ಅರ್ಚಕನನ್ನು ಬಂಧಿಸಿದ್ದಾರೆ. ಬಂಧನದ ನಂತರ ಅರ್ಚಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು.
ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 299 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇದು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು ಮತ್ತು ಪೂಜಾ ಸ್ಥಳಕ್ಕೆ ಹಾನಿ ಮಾಡುವುದಕ್ಕೆ ಸಂಬಂಧಿಸಿದೆ. ಈ ನಿಬಂಧನೆಯ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

