ದುಬೈ: ಯುಎಇ ಸರ್ಕಾರ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ನೀಡುವುದನ್ನು ನಿಲ್ಲಿಸಿದೆ. ಪಾಕಿಸ್ತಾನಿಗಳ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾನವ ಹಕ್ಕುಗಳ ಸೆನೆಟ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಬಹಿರಂಗಪಡಿಸುವಿಕೆ ನಡೆದಿದ್ದು,ಒಂದು ವೇಳೆ ಸಂಪೂರ್ಣ ನಿಷೇಧ ಹೇರಿದರೆ ನಂತರ ಅದನ್ನು ತೆಗೆದುಹಾಕುವುದು ಕಷ್ಟಕರವಾಗಿರುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪಾಕಿಸ್ತಾನದ ಪ್ರಜೆಗಳು ಭಿಕ್ಷಾಟನೆ, ಕಳ್ಳಸಾಗಣೆ, ಮಾದಕವಸ್ತು ಮತ್ತು ಮಾನವ ಕಳ್ಳಸಾಗಣೆ ಸೇರಿದಂತೆ ಹಲವಾರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕಾರಣ, ಅರಬ್ ಎಮಿರೇಟ್ಸ್ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಆರೋಪಿಸಿದೆ. ಇತ್ತೀಚಿನ ಬಂಧನಗಳಲ್ಲಿ ಪಾಕಿಸ್ತಾನಿ ಪ್ರಜೆಗಳ ಸಂಖ್ಯೆ ಗಣನೀಯ ಹೆಚ್ಚಾಗಿದ್ದು. ಡಿಸೆಂಬರ್ 2024 ರಲ್ಲಿ ಯುಎಇ, ಸೌದಿ ಅರೇಬಿಯಾ ಮತ್ತು ಇತರ ಗಲ್ಫ್ ರಾಷ್ಟ್ರಗಳು ಕನಿಷ್ಠ 30 ಪಾಕಿಸ್ತಾನಿ ನಗರಗಳ ಜನರ ಮೇಲೆ ಅನಿರ್ದಿಷ್ಟ ವೀಸಾ ನಿಷೇಧವನ್ನು ವಿಧಿಸಿದೆ.

ಸರ್ಕಾರಿ ಮಾಹಿತಿಯ ಪ್ರಕಾರ, ಪ್ರತಿ ವರ್ಷ 800,000 ಕ್ಕೂ ಹೆಚ್ಚು ಪಾಕಿಸ್ತಾನಿಗಳು ಮಧ್ಯಪ್ರಾಚ್ಯ ಮತ್ತು ಕೊಲ್ಲಿ ಪ್ರದೇಶದ ವಿವಿಧ ದೇಶಗಳಿಗೆ ವೀಸಾಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಅನೇಕರು ಉದ್ಯೋಗಗಳನ್ನು ಹುಡುಕಿಕೊಂಡು ಹೋಗುತ್ತಾರೆ ಅಥವಾ ಪಾಶ್ಚಿಮಾತ್ಯ ದೇಶಗಳಿಗೆ ಸಾರಿಗೆ ಮಾರ್ಗವಾಗಿ ಈ ಪ್ರದೇಶವನ್ನು ಬಳಸುತ್ತಾರೆ, ಸೌದಿ ಅರೇಬಿಯಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ ಹಜ್ ಸಮಯದಲ್ಲಿ ಭಿಕ್ಷಾಟನೆ ಹಾಗೂ ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ್ದ 4,000 ಕ್ಕೂ ಹೆಚ್ಚು ಪಾಕಿಸ್ತಾನಿ ಯಾತ್ರಿಕರನ್ನು ಮೆಕ್ಕಾ ಮತ್ತು ಮದೀನಾದಲ್ಲಿ ಬಂಧಿಸಿದ್ದಾರೆ.

ಸದ್ಯ ಯುಎಇ ಸರ್ಕಾರ ನೀಲಿ ಪಾಸ್ಪೋರ್ಟ್ ಮತ್ತು ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿರುವ ಪಾಕಿಸ್ತಾನಿಗಳಿಗೆ ಮಾತ್ರ ವೀಸಾ ನೀಡುವುದನ್ನು ಮುಂದುವರೆಸಿದೆ. ಪಾಕಿಸ್ತಾನದ ನೀಲಿ ಪಾಸ್ಪೋರ್ಟ್ ಅನ್ನು ಸರ್ಕಾರಿ ಅಧಿಕಾರಿಗಳು ಮತ್ತು ವಿಶೇಷ ವರ್ಗದ ವ್ಯಕ್ತಿಗಳಿಗೆ ನೀಡಲಾಗುತ್ತದೆ, ಆದರೆ ಸಾಮಾನ್ಯ ನಾಗರಿಕರು ಹಸಿರು ಪಾಸ್ಪೋರ್ಟ್ ಹೊಂದಿದ್ದಾರೆ.

