ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್. ಉಮೇಶ್ ನಿಧನರಾಗಿದ್ದಾರೆ. 80 ವರ್ಷ ವಯಸ್ಸಿನ ಅವರು ಕಳೆದ ಹಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಿಗ್ಗೆ 8:30ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರು ಎಳೆದಿದ್ದಾರೆ.
ಇತ್ತೀಚೆಗೆ ಉಮೇಶ್ ಅವರು ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಸೊಂಟ ,ಕಾಲು,ಭುಜಕ್ಕೆ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ವೇಳೆ ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.

ಉಮೇಶ್ ಅವರು 1960ರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 1960ರಲ್ಲಿ ‘ಮಕ್ಕಳ ರಾಜ್ಯ’ ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಸುಮಾರು 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರಿಗೆ 1975ರಲ್ಲಿ ಕಥಾ ಸಂಗಮ ಎನ್ನುವ ಸಿನಿಮಾಕ್ಕೆ ಉತ್ತಮ ಪೋಷಕ ನಟ ಎಂಬ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿದ್ದರು.ಅವರು ಇತ್ತೀಚಿನ ತನಕವೂ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದರು.ಇಂದು ಬೆಂಗಳೂರಿನ ಜೆ.ಪಿ ನಗರ ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

