ಮಂಗಳೂರು : ವಿಧಾತ್ರೀ ಕಲಾವಿದೆರ್ ಕುಡ್ಲ (ರಿ) ತಂಡ ಸಾದರ ಪಡಿಸುವ ಭಕ್ತಿ ಪ್ರಧಾನ ನಾಟಕ “ಜೈಹನುಮಾನ್” ಇದರ ಪ್ರಥಮ ಪ್ರದರ್ಶನ ಡಿಸೆಂಬರ್ 4 ರಂದು ಸಂಜೆ 5 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಪ್ರದರ್ಶನ ಗೊಳ್ಳಲಿದೆ ಎಂದು ಚಿದಾನಂದ ಅದ್ಯಪಾಡಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಳೆದ 16 ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿಸಿ ಕೊಂಡು,ಅನೇಕ ಹಾಸ್ಯಮಯ,ಸಾಂಸಾರಿಕ,ಐತಿಹಾಸಿಕ, ಜಾನಪದ,ಭಕ್ತಿ ಪ್ರಧಾನ ನಾಟಕಗಳನ್ನು ಸಮಾಜಕ್ಕೆ ನೀಡಿದ ವಿಧಾತ್ರೀ ಕಲಾವಿದೆರ್ ಕುಡ್ಲ(ರಿ) ತಂಡವು ಈ ವರ್ಷ ಮತ್ತೊಂದು ಅಪ್ರತಿಮ ಪರಾಕ್ರಮ, ಭಕ್ತಿ ಮತ್ತು ತ್ಯಾಗದ ಪ್ರತಿರೂಪವಾದ ಹನುಮಂತನ ವೀರಗಾಥೆಯನ್ನು ಸಿನಿಮೀಯ ರೀತಿಯ ನಾಟಕದ ಮೂಲಕ ಡಿಸೆಂಬರ್ 4 ರಂದು ಸಂಜೆ 5 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಪ್ರಥಮ ಪ್ರದರ್ಶನವಾಗಿ ಅನಾವರಣಗೊಳಿಸಲಿದ್ದೇವೆ ಎಂದರು.
ರಾಮಾಯಣದ ಕಥೆಯನ್ನು ಆಧರಿಸಿರುವ ಈ ನಾಟಕವು 18 ಲಕ್ಷ ರೂ. ವೆಚ್ಚದಲ್ಲಿ ಮೂಡಿಬಂದಿರುವ ವಿಭಿನ್ನ ಶೈಲಿಯ ಈ ನಾಟಕವು ತುಳು ಮತ್ತು ಕನ್ನಡದಲ್ಲಿ ಆಧುನಿಕ ರಂಗ ವಿನ್ಯಾಸದೊಂದಿಗೆ,ವಿಶಿಷ್ಟ ಬೆಳಕಿನ ಸಂಯೋಜನೆಯಲ್ಲಿ ಮೂಡಿಬರಲಿದೆ. ಈ ನಾಟಕವು ಕೇವಲ ಮನೋರಂಜನೆಗೆ ಮೀಸಲಾಗಿರದೆ, ಭಕ್ತಿ, ಧೈರ್ಯ ಮತ್ತು ನಮ್ಮ ಸಂಸ್ಕೃತಿಯನ್ನು ಜಾಗೃತಗೊಳಿಸುವ ಒಂದು ಪ್ರಕ್ರಿಯೆಯಾಗಿದ್ದು, ತುಳು ರಂಗಭೂಮಿಯ ಬದಲಾವಣೆಯ ಹರಿಕಾರ ವಿಜಯ ಕುಮಾರ್ ಕೊಡಿಯಾಲ್ ಬೈಲ್ರವರು ಈ ನಾಟಕವನ್ನು ನಿರ್ದೇಶಿಸಿದ್ದು,ರಂಗಭೂಮಿಯಲ್ಲಿ ಮತ್ತೊಂದು ಸಂಚಲನವನ್ನು ಸೃಷ್ಠಿಸಲಿದೆ.

ತುಳು ರಂಗಭೂಮಿಯ ಖ್ಯಾತ ನಿರ್ದೇಶಕ ದೇವದಾಸ್ ಕಾಪಿಕಾಡ್ ,ಖ್ಯಾತ ಗಾಯಕರಾದ ರವೀಂದ್ರ ಪ್ರಭು, ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ವೇಣೂರು, ಚಲನಚಿತ್ರ ನಟ ರಕ್ಷಣ್ ಮಾಡೂರು, ಸಂಗೀತಾ ಭಟ್, ಮಲ್ಲಿಕಾ ಮಟ್ಟಿ, ಮಹಿಮಾ ಭಂಢಾರಿ. ಮುಂತಾದವರು ಹಾಡಿದ ಹಾಡಿಗೆ ಶಶಿರಾಜ್ ಕಾವೂರು, ಸಂದೀಪ್ ಉಡುಪಿ,ದೀಪಕ್ ಚೇಳಾರ್, ನವೀನ್ ಸುವರ್ಣ ಪಡ್ರೆ ಮುಂತಾದವರು ಸಾಹಿತ್ಯ ರಚಿಸಿದ್ದಾರೆ. ಶೀರ್ಷಿಕೆ ಗೀತೆ ಹಾಗೂ ಮತ್ತೊಂದು ವಿಭಿನ್ನ ಗೀತೆಗೆ ಮುಂಬಯಿಯ ಪುರಾನ್ ಶೆಟ್ಟಿಗಾರ್ ಸಂಗೀತ ಸಂಯೋಜನೆಯನ್ನು ಮಾಡಿದ್ದು, ಗುರು ಬಾಯಾರ್ರವರು ಹಿನ್ನೆಲೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಾಯಿರಾಮ್ ಸ್ಟುಡಿಯೋದಲ್ಲಿ ಧ್ವನಿ ಮುದ್ರಣಗೊಂಡ ಈ ನಾಟಕವನ್ನು ಭರತ್ ಎಸ್.ಕರ್ಕೇರ ಮತ್ತು ವಿಧಾತ್ರಿ ತಂಡ ರಚಿಸಿದ್ದಾರೆ.

ಈ ನಾಟಕದ ಪ್ರಥಮ ಪ್ರದರ್ಶನವನ್ನು ಹಿಂದೂ ಯುವ ಸೇನೆ ಕೊಡಿಯಾಲ್ ಬೈಲ್ ಘಟಕವು ಪ್ರಾಯೋಜಿಸಿದ್ದು. ಪ್ರದರ್ಶನವು ಉಚಿತವಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪಮ್ಮಿ ಕೊಡಿಯಾಲ್ ಬೈಲ್, ಪ್ರವೀಣ್ ಕುಂಪಲ, ರಾಜೇಶ್ ಸೈಲ್ಯಾಕ್, ಟೀಪೇಶ್ ಅಮೀನ್ ಉಪಸ್ಥಿತರಿದ್ದರು.

