ಮಂಗಳೂರು : ತುಳುಕೂಟ ಕುಡ್ಲ ಹಾಗೂ ಸರಯೂ ಬಾಲ ಯಕ್ಷ ವೃoದ ಕೋಡಿಕಲ್ ವತಿಯಿಂದ ದಿ.ಬಿ.ದಾಮೋದರ ನಿಸರ್ಗರ ಸಂಸ್ಮರಣೆ ಹಾಗೂ ತುಳು ತಾಳಮದ್ದಳೆ ಸಪ್ತಾಹ ಕಾರ್ಯಕ್ರಮ ಡಿ.7 ರಿಂದ 13 ರ ವರೆಗೆ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಕಂಕನಾಡಿ ಇಲ್ಲಿ ಪ್ರತಿದಿನ ಸಂಜೆ 5ಗಂಟೆಗೆ ಜರಗಲಿದೆ ಎಂದು ವರ್ಕಾಡಿ ರವಿ ಅಲೆವೂರಾಯ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

ಇತ್ತೀಚೆಗಷ್ಟೇ ತುಳುಕೂಟವು ತನ್ನ ಸುವರ್ಣ ಮಹೋತ್ಸವ ವರ್ಷದ ಹರ್ಷವನ್ನು ಹಂಚಿಕೊಂಡಿದೆ. ಇದರಲ್ಲಿ 30 ವರ್ಷಗಳ ದೀರ್ಘಕಾಲ ಅಧ್ಯಕ್ಷರಾಗಿ ವಿಶೇಷ ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ನೀಡುತ್ತಾ ಅಧ್ಯಕ್ಷ ಪೀಠಕ್ಕೆ ಘನತೆ ತಂದುಕೊಟ್ಟ ದಿವಂಗತ ದಾಮೋದರ ನಿಸರ್ಗ ರ ನೆನಪಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಆ ಪ್ರಯುಕ್ತ ಇದೇ ಬರುವ 7 ರಿಂದ 13ರವರೆಗೆ ಕಂಕನಾಡಿ ಗರೋಡಿ ಶ್ರೀ ಬ್ರಹ್ಮ ಬೈದ್ಯರ್ಕಳ ಕ್ಷೇತ್ರದಲ್ಲಿ ಕಾರ್ಯಕ್ರಮ ಜರಗಲಿದೆ ಎಂದರು.
7ನೇ ತಾರೀಖಿನಂದು ಜರಗುವ ಕಾರ್ಯಕ್ರಮದ ಉದ್ಘಾಟನೆಯನ್ನು ಗರೋಡಿಯ ಅಧ್ಯಕ್ಷರಾದ ಚಿತ್ತರಂಜನ್ರವರು ಉದ್ಘಾಟಿಸಲಿದ್ದಾರೆ. ಮತ್ತು ಕೊನೆಯ ದಿನ ನಿಸರ್ಗರ ಒಡನಾಡಿಯಾದ ಜೆ.ವಿ.ಶೆಟ್ಟಿ, ಯವರಿಗೆ ಸನ್ಮಾನ ಕಾರ್ಯಕ್ರಮವೂ ಇರುತ್ತದೆ. ದಿನನಿತ್ಯವೂ ಸಂಜೆ 5 ಗಂಟೆಯಿಂದ ಆಹ್ವಾನಿತ ತಂಡಗಳಿಂದ ಬೇರೆ ಬೇರೆ ಆಖ್ಯಾನಗಳ ತಾಳಮದ್ದಳೆ ನಡೆಯಲಿದೆ.

07-12-2025ನೇ ಆದಿತ್ಯವಾರ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ, ಬೊಳುವಾರು ಪುತ್ತೂರು ಇವರಿಂದ “ಪಗರಿದ ಸಂಕ” , 08-12-2025ನೇ ಸೋಮವಾರ ಶ್ರೀ ವಾಗೀಶ್ವರೀ ಕಲಾವರ್ಧಕ ಯಕ್ಷಗಾನ ಮಂಡಳಿ, ಮಹಾಮಯಾ ದೇವಸ್ಥಾನ, ರಥಬೀದಿ ಇವರಿಂದ “ತುಳುನಾಡ ಬಲ್ಲ್ಯೇಂದ್ರೆ” , 09-12-2025ನೇ ಮಂಗಳವಾರ ಯಕ್ಷಕಲಾ, ಸುರತ್ಕಲ್ ಇವರಿಂದ “ಬೀರೆ ಸುಧನ್ವೆ” , 10-12-2025ನೇ ಬುಧವಾರದಂದು ಯಕ್ಷ ಮಂಜುಳಾ ಮಹಿಳಾ ತಾಳಮದ್ದಳೆ ಬಳಗ, ಕದ್ರಿ ಇವರಿಂದ “ಯಕ್ಷಮಣಿ” , 11-12-2025ನೇ ಗುರುವಾರದಂದು ಸರಯೂ ಯಕ್ಷವೃಂದ, ಕೋಡಿಕಲ್ : “ಕಾನದ ಕೌಶಿಕೆ”, 12-12-2025ನೇ ಶುಕ್ರವಾರದಂದು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ, ಪಾಂಡೇಶ್ವರ : “ಕೋಟಿಚೆನ್ನಯ”,ಹಾಗೂ 13-12-2025ನೇ ಶನಿವಾರದಂದು ಸರಯೂ ಯಕ್ಷ ಬಳಗದವರಿಂದ “ಮಾಯಕೊದ ಬಿನ್ನೆದಿ” ಯಕ್ಷಗಾನ ಬಯಲಾಟ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಉಚಿತ ಪ್ರವೇಶವಿದ್ದು ತಮ್ಮನ್ನು ಪ್ರೀತಿಪೂರ್ವಕವಾಗಿ ಶ್ರೀ ಕ್ಷೇತ್ರ ಗರೋಡಿಗೆ ಆಹ್ವಾನಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಹರಿಕೃಷ್ಣ ಪುನರೂರು, ಶ್ರೀಮತಿ ಹೇಮಾ ದಾಮೋದರ ನಿಸರ್ಗ, ಜೆ.ವಿ.ಶೆಟ್ಟಿ, ಪದ್ಮನಾಭ ಕೋಟ್ಯಾನ್, ನಾಗೇಶ್ ದೇವಾಡಿಗ ಕದ್ರಿ, ಪ್ರಮೋದ್ ಕೆ. ಉಪಸ್ಥಿತರಿದ್ದರು.

