ಬೆಂಗಳೂರು : ಹೊಸ ವರ್ಷಾಚರಣೆಗೂ ಮುನ್ನ ನಡೆದ ಪ್ರಮುಖ ದಾಳಿಯಲ್ಲಿ,ಸಿಸಿಬಿ ಪೋಲಿಸರು ಪ್ರತ್ಯೇಕ ಘಟನೆಗಳಲ್ಲಿ 10.36 ಕೆಜಿಗೂ ಹೆಚ್ಚು ಎಂಡಿಎಂಎ ಹರಳುಗಳು ಮತ್ತು 8 ಕೆಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಇದರ ಒಟ್ಟಾರೆ ಮೌಲ್ಯ ₹28.75 ಕೋಟಿ. ಬಂಧಿತರು ತಾಂಜಾನಿಯಾದ 29 ವರ್ಷದ ಮಹಿಳೆ ನ್ಯಾನ್ಸಿ ಒಮರಿ ಲಾವಾ ಮತ್ತು ನೈಜೀರಿಯಾದ ಎಮುನಾಲ್ ಅರೆಂಜಿ ಇಡಿಕ ಎಂಬ ಇಬ್ಬರು ವಿದೇಶಿ ಪ್ರಜೆಗಳಾಗಿದ್ದಾರೆ.
ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಸಿಸಿಬಿ ಅಧಿಕಾರಿಗಳು ಸಂಪಿಗೆಹಳ್ಳಿಯ ಲೇಔಟ್ನಲ್ಲಿರುವ ಮನೆಯ ಮೇಲೆ ದಾಳಿ ನಡೆಸಿ, ಹಬ್ಬದ ಸಮಯದಲ್ಲಿ ಮಾರಾಟಕ್ಕೆ ಎಂಡಿಎಂಎ ಸಂಗ್ರಹಿಸಿದ್ದ ಆರೋಪದ ಮೇಲೆ ತಾಂಜಾನಿಯಾದ ನ್ಯಾನ್ಸಿ ಒಮರಿ ಲಾವಾ ಅವರನ್ನು ಬಂಧಿಸಿದರು

ನ್ಯಾನ್ಸಿ ಒಮರಿ ಲಾವಾ 2023 ರಲ್ಲಿ ಪ್ರವಾಸಿ ವೀಸಾದಲ್ಲಿ ದೆಹಲಿಗೆ ಬಂದಿದ್ದರು. ನಂತರ ಅವರು ಬೆಂಗಳೂರಿಗೆ ತೆರಳಿ ಅಲ್ಲಿ ಕೇಶ ವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ತನಿಖೆಯಲ್ಲಿ ಅವರು ದೆಹಲಿ ಮತ್ತು ಇತರ ಸ್ಥಳಗಳಿಂದ ಎಂಡಿಎಂಎ ಅನ್ನು ಪಡೆದು ಬೆಂಗಳೂರಿನ ಪರಿಚಿತ ಗ್ರಾಹಕರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.ಇದೀಗ ಆಕೆಯ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಮತ್ತೊಂದು ಪ್ರಕರಣ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ಲಾಲ್ಬಾಗ್ ಸೌತ್ ಗೇಟ್ನಲ್ಲಿರುವ ಬ್ಯಾಸ್ಕೆಟ್ಬಾಲ್ ಅಂಕಣದ ಬಳಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ನೈಜೀರಿಯಾದ 28 ವರ್ಷದ ಎಮ್ಯಾನುಯೆಲ್ ಅರಿಂಜೆ ಎಂಬಾತನನ್ನು ಸಿಸಿಬಿ ಪೋಲಿಸರು ಬಂಧಿಸಿದ್ದಾರೆ. ಆತನಿಂದ ₹2.25 ಕೋಟಿ ಮೌಲ್ಯದ 1 ಕೆಜಿ 115 ಗ್ರಾಂ ಎಂಡಿಎಂಎ ಹರಳುಗಳನ್ನು ಸಿಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆರೋಪಿಯು 2021 ರಲ್ಲಿ ವ್ಯಾಪಾರ ವೀಸಾದಲ್ಲಿ ಭಾರತಕ್ಕೆ ಬಂದಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ. ಆತನನ್ನು 2024 ರ ಫೆಬ್ರವರಿಯಲ್ಲಿ ಗೋವಿಂದಪುರ ಪೊಲೀಸರು ಎನ್ಡಿಪಿಎಸ್ ಕಾಯ್ದೆಯಡಿ ಬಂಧಿಸಿದ್ದರು. 2025 ರ ಏಪ್ರಿಲ್ನಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಆತ ಮತ್ತೆ ಮಾದಕವಸ್ತು ಮಾರಾಟವನ್ನು ಆರಂಭಿಸಿದ್ದ.
ಆತ ದೆಹಲಿ, ಗೋವಾ ಮತ್ತು ಇತರ ವಿದೇಶಿ ವ್ಯಾಪಾರಿಗಳಿಂದ ಎಂಡಿಎಂಎ ಮಾದಕ ವಸ್ತುವನ್ನು ಪಡೆಯುತ್ತಿದ್ದ ಎನ್ನಲಾಗಿದೆ. ಆತನ ಸಹಚರ ವಿದೇಶಿಯನನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

