ಮಂಗಳೂರು : ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾಕೇಂದ್ರ ಸಂಸ್ಥೆಯು 2025-26 ರ ಸಾಲಿನ ಪ್ರತಿಷ್ಠಿತ ಬಾಬು ಕುಡ್ತಡ್ಕ ಪ್ರಶಸ್ತಿಗೆ ಈ ಬಾರಿ ಹಿರಿಯ ಯಕ್ಷ ಕಲಾವಿದ ಪುತ್ತಿಗೆ ಕುಮಾರ ಗೌಡರನ್ನು ಆಯ್ಕೆ ಮಾಡಿದೆ. ಇದರ ಭಾಗವಾಗಿ ಪ್ರಶಸ್ತಿ ಸಮಾರಂಭವು ಡಿಸೆಂಬರ್ 7ರಂದು ಸಂಜೆ 4.00 ರಿಂದ ಮಂಗಳೂರಿನ ರಾಮಕೃಷ್ಣ ಆಶ್ರಮದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಿತಿಯ ಸಂಚಾಲಕರಾದ ಕೆ.ಸಿ. ಹರಿಶ್ಚಂದ್ರ ರಾವ್ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ,ಮೂಡಬಿದಿರೆಯ ಜನತೆಯಿಂದ ಪ್ರೀತಿಯಿಂದ “ಕುಮಾರಣ್ಣ” ಎಂದು ಕರೆಯಲ್ಪಡುವ ಶ್ರೀ ಯುತರಿಗೆ ಬಾಬು ಕುಡ್ತಡ್ಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು . ತನ್ನ ಸರ್ವಸ್ವವನ್ನು ಯಕ್ಷಗಾನಕ್ಕೆ ಮುಡಿಪಾಗಿಸಿರುವ ಇವರನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

ಪ್ರಶಸ್ತಿಯು ಶಾಶ್ವತ ಫಲಕ, ಸ್ಮರಣಿಕೆ, ಪದಕ, ಫಲಕಾಣಿಕೆಗಳೊಂದಿಗೆ 10,000/-ನಗದು ಪುರಸ್ಕಾರವನ್ನು ಗಣ್ಯರ ಉಪಸ್ಥಿತಿಯಲ್ಲಿ ನೀಡಲಾಗುವುದು. ಅಂದು ಶಾಂಭವಿ ವಿಜಯ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು ಶುಂಭನಾಗಿ ಜಬ್ಬಾರ್ ಸಮೋ, ರಕ್ತಬೀಜನಾಗಿ ಸರ್ಪಂಗಳ , ದೇವಿಯಾಗಿ ಪ್ರಶಾಂತ್ ಹೊಳ್ಳ ಅರ್ಥ ಹೇಳಲಿದ್ದಾರೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಗೌರವಾಧ್ಯಕ್ಷ ಲ.ಬಿ. ಪ್ರಕಾಶ್ ಪೈ., ಅಧ್ಯಕ್ಷೆ ಲಲಿತಾ ಗೌಡ, ಪ್ರಧಾನ ಕಾರ್ಯದರ್ಶಿ ಆನಂದರಾವ್, ಖಚಾಂಚಿ ಅಶೋಕ್ ಜಾಧವ್, ಸೇವಾ ಕಾರ್ಯದರ್ಶಿ ಸುಮಲತಾ, ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಕಲಾ ಹಾಗೂ ಮನೋಜ್ ಉಪಸ್ಥಿತರಿದ್ದರು

