ನವದೆಹಲಿ : ಭಾರತ ಪ್ರವಾಸಕ್ಕಾಗಿ ನಿನ್ನೆ ದೆಹಲಿಗೆ ಆಗಮಿಸಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿನ್ನೆ ದೆಹಲಿಯ ಅಧಿಕೃತ ನಿವಾಸದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಔತಣಕೂಟದಲ್ಲಿ ಭಾಗವಹಿಸಿದ್ದರು. ಇಂದು ಮೋದಿ ಹಾಗೂ ಪುಟಿನ್ ಇಬ್ಬರೂ ದ್ವಿಪಕ್ಷೀಯ ಸಭೆ ನಡೆಸಿದ್ದು,ನಂತರ ದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ದ್ವಿಪಕ್ಷೀಯ ಮಾತುಕತೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಭಾರತ-ರಷ್ಯಾ ನಡುವೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ರಕ್ಷಣೆ, ವ್ಯಾಪಾರ, ಇಂಧನ ಪೂರೈಕೆ ಸೇರಿದಂತೆ ಹಲವು ಒಪ್ಪಂದವಾಗಿದೆ. ಈ ಬಗ್ಗೆ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ತೈಲ ಪೂರೈಕೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

ಭಾರತ ಮತ್ತು ರಷ್ಯಾ ಎರಡೂ ದೇಶಗಳ ನಡುವೆ ಆರ್ಥಿಕ ಸಹಕಾರವನ್ನು ಹೆಚ್ಚಿಸಲು ವಿಷನ್- 2030 ದಾಖಲೆಗೆ ಸಹಿ ಹಾಕಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಉಪಕ್ರಮವು ಎರಡೂ ರಾಷ್ಟ್ರಗಳಿಗೆ ಹಲವಾರು ವ್ಯಾಪಾರ ಮಾರ್ಗಗಳನ್ನು ತೆರೆಯುತ್ತದೆ ಎಂದು ಅವರು ತಿಳಿಸಿದ್ದಾರೆ. “ಆರ್ಥಿಕ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು, ನಾವು ವಿಷನ್ 2030 ದಾಖಲೆಗೆ ಸಹಿ ಹಾಕಿದ್ದೇವೆ. ಇಂದು ನಾವಿಬ್ಬರೂ ಭಾರತ-ರಷ್ಯಾ ವ್ಯಾಪಾರ ವೇದಿಕೆಯಲ್ಲಿ ಭಾಗವಹಿಸುತ್ತೇವೆ.ಈ ವೇದಿಕೆಯು ನಮ್ಮ ವ್ಯವಹಾರ ಸಂಬಂಧಗಳನ್ನು ಬಲಪಡಿಸುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಈ ವೇಳೆ ರಷ್ಯಾದ ಪ್ರವಾಸಿಗರಿಗೆ ಭಾರತ ಇ-ವೀಸಾ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದನ್ನು 30 ದಿನಗಳಲ್ಲಿ ಇ-ವೀಸಾಗಳ ಪ್ರಕ್ರಿಯೆ ನಡೆಸಲಾಗುವುದು. ಮೊದಲ ಇ-ಟೂರಿಸ್ಟ್ ವೀಸಾ ಮತ್ತು ಗುಂಪು ಪ್ರವಾಸಿ ವೀಸಾ ಸೇವೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಮೋದಿ ಹೇಳಿದ್ದಾರೆ. ಈ ವೀಸಾ ಉಚಿತವಾಗಿರುತ್ತದೆ.

