ಕಡೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ದತ್ತ ಜಯಂತಿ ಬ್ಯಾನರ್ ತೆರವುಗೊಳಿಸುವ ವಿಚಾರವಾಗಿ ಉಂಟಾದ ಗಲಾಟೆ ಕೊಲೆಯೊಂದಿಗೆ ಅಂತ್ಯವಾಗಿದೆ.
ಕಾಂಗ್ರೆಸ್ ಕಾರ್ಯಕರ್ತ, ಮುಂದೆ ಬರಲಿರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸಖರಾಯಪಟ್ಟಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಂಕಾಕ್ಷಿಯಾಗಿದ್ದ ಗಣೇಶ್ ಗೌಡ (40) ಅವರನ್ನು ಬಜರಂಗದಳ ಕಾರ್ಯಕರ್ತರು ಎನ್ನಲಾದ ಸಂಜಯ್ ಮತ್ತು ಮಿಥುನ್ ಎಂಬವರು ಮಚ್ಚಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ
ಈ ಘಟನೆ ಸಖರಾಪಟ್ಟಣದ ಸಮೀಪದ ಕಲ್ಮುರುಡೇಶ್ಚರ ಮಠದ ಬಳಿ ನಿನ್ನೆ ರಾತ್ರಿ 10:30ರ ವೇಳೆಗೆ ನಡೆದಿದೆ. ಸಖರಾಯಪಟ್ಟಣ ಬಾರ್ ಬಳಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಬಾರ್ ಬಳಿ ಗಲಾಟೆ ನಡೆದ ಅರ್ಧ ಗಂಟೆ ನಂತರ ಮಠದ ಬಳಿ ಮತ್ತೆ ಗಲಾಟೆ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ಹೋಗಿ ಮಚ್ಚಿನಿಂದ ಗಣೇಶ್ ಮೇಲೆ ಹಲ್ಲೆ ನಡೆದು ಹತ್ಯೆ ಮಾಡಲಾಗಿದೆ. ಸಂಧರ್ಭದಲ್ಲಿ ಆರೋಪಿ ಸಂಜಯ್ ತಲೆಗೂ ಗಂಭೀರ ಗಾಯವಾಗಿದ್ದು, ಆತನನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶವಾಗಾರಕ್ಕೆ ಭೇಟಿ ನೀಡಿದ ಸ್ಥಳೀಯ ಶಾಸಕ ಆನಂದ್ ಅವರು ‘ಬ್ಯಾನರ್ ತೆರವು ವಿಚಾರವಾಗಿ ಗಲಾಟೆ ನಡೆದಿದೆ. ನಂತರ ಗಣೇಶ್ ಅವರನ್ನು ಕರೆಸಿ ಕೊಲೆ ಮಾಡಿದ್ದಾರೆ. ಈ ಪ್ರಕರಣದಲ್ಲಿ 8 ಜನರು ಶಾಮೀಲಾಗಿರುವ ಶಂಕೆ ಇದೆ. ಕೆಲವು ದಿನಗಳಿಂದಲೇ ಎರಡು ಗುಂಪುಗಳ ನಡುವೆ ಉದ್ವಿಗ್ನತೆ ಇತ್ತು. ಪೊಲೀಸರು ಸಮಯಕ್ಕೆ ಕ್ರಮ ಕೈಗೊಂಡಿದ್ದರೆ ಈ ಘಟನೆ ತಪ್ಪಿಸಬಹುದಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧಿಸಿ ಸಖರಾಯಪಟ್ಟಣಾದಾದ್ಯಂತ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು. ಆರೋಪಿಗಳಾದ ಸಂಜಯ್, ಭೂಷಣ್, ಮಿಥುನ್ ಸೇರಿದಂತೆ 5 ಜನರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ

