ಅಹಮದಾಬಾದ್ : ಈಗ ವಿಚ್ಛೇದನ ಪಡೆಯಲು ದೊಡ್ಡ ಕಾರಣಗಳ ಅಗತ್ಯವಿಲ್ಲ.ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸಹ ಬೇರೆಯಾಗಲು ಒಂದು ಕಾರಣವೆಂದು ಹೇಳಬಹುದು. ಈ ಅಹಮದಾಬಾದ್ ದಂಪತಿಗಳು ಅದಕ್ಕೆ ಪುರಾವೆಯಾಗಿದ್ದಾರೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಆಹಾರದಲ್ಲಿ ಬಳಕೆಯ ಬಗ್ಗೆ ಉಂಟಾದ ವಿವಾದದಿಂದ ಖುಷಿ ಖುಷಿಯಾಗಿ ಇದ್ದ ಅಹಮದಾಬಾದ್ ದಂಪತಿಗಳ 11 ವರ್ಷಗಳ ದಾಂಪತ್ಯವು ವಿಚ್ಛೇದನದಲ್ಲಿ ಕೊನೆಗೊಂಡಿದೆ.
ಆಹಾರ ಆದ್ಯತೆಗಳಲ್ಲಿನ ಸರಳ ವ್ಯತ್ಯಾಸದಿಂದ ಪ್ರಾರಂಭವಾದ ಜಗಳ ಇದೀಗ ಪೂರ್ಣ ಪ್ರಮಾಣದ ವೈವಾಹಿಕ ಸಂಘರ್ಷಕ್ಕೆ ಕಾರಣವಾಗಿ,ಅಂತಿಮವಾಗಿ ವಿಚ್ಛೇದನವು ಗುಜರಾತ್ ಹೈಕೋರ್ಟ್ ತನಕ ತಲುಪಿ ಕಾನೂನು ಹೋರಾಟದಲ್ಲಿ ಕೊನೆಗೊಂಡಿದೆ.
2002ರಲ್ಲಿ ವಿವಾಹವಾದ ಈ ದಂಪತಿಗೆ ಆರಂಭದಲ್ಲಿ ಅವರ ಆಹಾರ ಪದ್ಧತಿಯಲ್ಲಿ ಯಾವುದೇ ಸಮಸ್ಯೆಗಳಿರಲಿಲ್ಲ. ಎಲ್ಲವೂ ಓಕೆಯಾಗಿತ್ತು. ಸ್ವಾಮಿನಾರಾಯಣ ಪಂಥದ ನಿಷ್ಠಾವಂತ ಅನುಯಾಯಿಯಾಗಿದ್ದ ಪತ್ನಿ, ತನ್ನ ಧಾರ್ಮಿಕ ಆಚರಣೆಯ ಭಾಗವಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸುತ್ತಿರಲಿಲ್ಲ, ಆಕೆ ವ್ರತವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಳು.

ಆಕೆಯ ಪತಿ ಮತ್ತು ಅತ್ತೆ ಆಕೆ ತಯಾರಿಸಿದ ಆಹಾರವನ್ನೇ ಸೇವಿಸುವುದನ್ನು ಮುಂದುವರೆಸಿದರು.ಕಾಲಾನಂತರದಲ್ಲಿ, ಅವರ ಊಟದಲ್ಲಿನ ಅಂತರವು ನಿಧಾನವಾಗಿ ಅವರ ಸಂಬಂಧದಲ್ಲಿ ಅಂತರವಾಗಿ ಬದಲಾಯಿತು. ಪ್ರತ್ಯೇಕ ಅಡುಗೆ ವ್ಯವಸ್ಥೆಗಳು ರೂಢಿಯಾದವು ಮತ್ತು ಮನೆಯೊಳಗೆ ಉದ್ವಿಗ್ನತೆ ಬೆಳೆಯಲು ಪ್ರಾರಂಭಿಸಿತು.
ಭಿನ್ನಾಭಿಪ್ರಾಯಗಳು ತೀವ್ರಗೊಂಡಂತೆ, ಮನೆಯ ವಾತಾವರಣ ಹದಗೆಟ್ಟಿತು. ಅಂತಿಮವಾಗಿ ಹೆಂಡತಿ ಮಗುವಿನೊಂದಿಗೆ ಗಂಡನ ಮನೆಯನ್ನು ತೊರೆದು ತಾಯಿ ಮನೆಯನ್ನು ಸೇರಿದಳು.ತಾಯಿ ಮನೆಯವರು ಸೇರಿ ಪಂಚಾಯಿತಿ ಮಾತುಕತೆಗಳೂ ನಡೆಸಿದರೂ ಮುರಿದು ಬಿತ್ತು. ಪ್ರಕರಣ ಪೋಲಿಸ್ ಮೆಟ್ಟಿಲನ್ನೂ ಏರಿತ್ತು. ಕೊನೆಗೆ 2013 ರಲ್ಲಿ,ಪತಿ ವಿಚ್ಛೇದನ ಕೋರಿ ಅಹಮದಾಬಾದ್ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದನು.

ತನ್ನ ಹೆಂಡತಿ ಆಹಾರ ಪದ್ಧತಿಯಲ್ಲಿ ರಾಜಿ ಮಾಡಿಕೊಳ್ಳಲು ನಿರಾಕರಿಸುವುದು ಕ್ರೌರ್ಯ ಮತ್ತು ಪರಿತ್ಯಾಗಕ್ಕೆ ಸಮನಾಗಿದೆ ಎಂದು ಆರೋಪಿಸಿ. 2024 ರಲ್ಲಿ, ಕುಟುಂಬ ನ್ಯಾಯಾಲಯವು ವಿಚ್ಛೇದನವನ್ನು ಮಂಜೂರು ಮಾಡಿ ಜೀವನಾಂಶ ಪಾವತಿಸಲು ನಿರ್ದೇಶಿಸಿತು.
ಹೈಕೋರ್ಟ್ ವಿಚಾರಣೆಯ ಸಮಯದಲ್ಲಿ, ಪತ್ನಿ ಅಂತಿಮವಾಗಿ ವಿಚ್ಛೇದನವನ್ನು ವಿರೋಧಿಸುವುದಿಲ್ಲ ಎಂದು ಹೇಳಿದರು. ಪ್ರತಿಯಾಗಿ,ಪತಿ 18 ತಿಂಗಳಿನಿಂದ ಜೀವನಾಂಶವನ್ನು ಪಾವತಿಸಿಲ್ಲ ,ಪಾವತಿಸದ ಜೀವನಾಂಶ ಮೊತ್ತವನ್ನು ಕಂತುಗಳಲ್ಲಿ ನ್ಯಾಯಾಲಯದಲ್ಲಿ ಠೇವಣಿ ಇಡಲು ಒಪ್ಪಿಕೊಂಡರು. ಆ ಹಂತದಲ್ಲಿ ಪರಸ್ಪರ ಒಪ್ಪಿಗೆ ದೊರೆತ ನಂತರ, ಹೈಕೋರ್ಟ್ ಪತ್ನಿಯ ಅರ್ಜಿಯನ್ನು ವಜಾಗೊಳಿಸಿ ವಿಚ್ಛೇದನವನ್ನು ಎತ್ತಿಹಿಡಿಯಿತು.
ಈರುಳ್ಳಿ ಬೆಳ್ಳೊಳ್ಳಿ ಘಾಟಿನಿಂದ ಉಂಟಾದ ಭಿನ್ನಾಭಿಪ್ರಾಯ ದಶಕಗಳ ಕಾಲದ ದಾಂಪತ್ಯವನ್ನು ಮುರಿದುಹಾಕಿತು.

