ಮಂಗಳೂರು : ಖ್ಯಾತ ಗಾಯಕಿ ದಿ|ಲತಾ ಮಂಗೇಶ್ವರ್ ರವರು ಹಾಡಿರುವ ಹಿಂದಿ ಹಾಡುಗಳು ಎಂದೆಂದಿಗೂ ಅಜರಾಮರವಾಗಿವೆ. ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಹಾಡಿರುವ ಹಾಡುಗಳು ಜೀವಂತವಾಗಿವೆ. ಈ ನಿಟ್ಟಿನಲ್ಲಿ ಅವರನ್ನು ಸ್ಮರಿಸುತ್ತಾ ಅವರು ಹಾಡಿರುವ ಹಿಂದಿ ಹಾಡುಗಳನ್ನೊಳಗೊಂಡ ಒಟ್ಟು 24 ಹಾಡುಗಳು ಸೋಲೋ ಮತ್ತು ಯುಗಳ ಗೀತೆಯ ಹಾಡುಗಳನ್ನು ಆಯ್ಕೆ ಮಾಡಿ, ಇದೇ ಡಿಸೆಂಬರ್ 14 ರ ರವಿವಾರದಂದು ಸಂಜೆ 5:30ಕ್ಕೆ ” ಲತಾಕಿ ಆವಾಜ್ ಶೋಭಾ ಕೆ ಸಾಥ್ ” ಎಂಬ ಕಾರ್ಯಕ್ರಮವನ್ನು ಮಂಗಳೂರಿನ ಕುದ್ಮುಲ್ ರಂಗರಾವ್ ಟೌನ್ ಹಾಲ್ನಲ್ಲಿ ಆಯೋಜಿಸಲಾಗಿದೆ ಎಂದು ಗಾಯಕಿ ಶೋಭಾ ಭಾಸ್ಕರನ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಂಗೀತವೆಂಬುದು ಪ್ರತಿಯೊಬ್ಬರನ್ನು ಆಕರ್ಷಿಸುವ ಒಂದು ಕಲೆ. ಎಲ್ಲರಿಗೂ ಹಾಡುವ ಪ್ರತಿಭೆ ಇರುವುದಿಲ್ಲ. ಭಗವಂತನ ಕರುಣೆಯಿಂದ ದೊರಕಿದ ಈ ಪ್ರತಿಭೆಯನ್ನು ಉಳಿಸಿ ಬೆಳಸಬೇಕಾದುದು ಸಂಗೀತಗಾರರಾದ ನಮ್ಮ ಕರ್ತವ್ಯ. ಆದುದರಿಂದ ತಾನು ನಡೆಸುತ್ತಿರುವ ಸಿಂಚನ ಮೆಲೋಡಿಸ್ ತಂಡದ ಗಾಯಕರೇ ಈ ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ.ಅಲ್ಲದೆ ಹಾಡುಗಳ ಮಧ್ಯೆ ಒಂದೆರಡು ನೃತ್ಯ ಕಾರ್ಯಕ್ರಮಗಳಿರುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿರಿಯ ಸಾಹಿತಿ ಶ್ರೀ ಹುಸೈನ್ ಕಾಟಿಪಳ್ಳರವರು ವಹಿಸಲಿದ್ದಾರೆ. ಉದ್ಘಾಟಕರಾಗಿ ದೇಶ ವಿದೇಶಗಳಲ್ಲಿ ಹೆಸರು ಪಡೆದ ಸಂಗೀತ ತಜ್ಞರೂ, ಗುರುಗಳೂ ಆದ ಶ್ರೀ ರೋಶನ್ ಫ್ರಾನ್ಸಿಸ್ ಮಾರ್ಟಿಸ್ರವರು, ಗಣ್ಯಅತಿಥಿಗಳಾಗಿ ಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲರಾದ ಲ| ಕುಡ್ಪಿ ಅರವಿಂದ್ ಶೆಣೈ MJF , ದ.ಕ ಜಿಲ್ಲಾ ಕೇರಳ ಸಮಾಜಂ ಇದರ ಅಧ್ಯಕ್ಷರಾದ ಶ್ರೀ ಟಿ.ಕೆ ರಾಜನ್ರವರು, ದ.ಕ ಜಿಲ್ಲಾ ಸಂಗೀತಗಾರರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಧನ್ರಾಜ್ ಹಾಗೂ ಶಬರಿ ಸೌಂಡ್ಸ್ ಮಾಲಿಕರಾದ ಶ್ರೀ ಜಯಶ್ ರವರು ಆಗಮಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ದೇಶವಿದೇಶಗಳಲ್ಲಿ ತಮ್ಮ ಪ್ರತಿಭೆಗಳಿಂದ ಹೆಸರುಗಳಿಸಿದ ಪ್ರಖ್ಯಾತ ಸಂಗೀತ ಕಲಾವಿದರರಾದ ದೀಪಕ್ (ಕೀಬೋರ್ಡ್), ಫೂಟ್ (ಶ್ರೀ ಜಯನ್), ರಿದ್ ಪೇಡ್ – ಶ್ರೀ ಪ್ರತಾಪ್ ಆಚಾರ್ಯ, ಶ್ರೀ ಪ್ರಜ್ವಲ್ (ತಬಲ), ಶ್ರೀ ರಾಜ್ಗೋಪಾಲ್ (ಗಿಟಾರ್) ಹಾಗೂ ಕಾರ್ಯಕ್ರಮ ನಿರೂಪಕರಾಗಿ ಶ್ರೀ ಖಾಲಿದ್ ರವರು ಸಹಕರಿಸಲಿದ್ದಾರೆ. ಒಟ್ಟಿನಲ್ಲಿ ಸುಂದರವಾದ ಕಾರ್ಯಕ್ರಮವನ್ನು ನೀಡುವಂತಹ ಭರವಸೆ ನಮ್ಮೆಲ್ಲರಲ್ಲಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ
ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮನೋಜ್ ಕುಮಾರ್, ನೌಶಾದ್, ಲ|ಆಸೀಫ್, ಸುರೇಶ್, ಸಲಾಲುದ್ದೀನ್ ಸಲಾ ಉಪಸ್ಥಿತರಿದ್ದರು.

