ಕೊಲ್ಕೋತ್ತಾ :ತಮ್ಮ GOAT Tour India 2025 ರ ಭಾಗವಾಗಿ ಮೂರು ದಿನಗಳ ಕಾಲ ಭಾರತಕ್ಕೆ ಭೇಟಿ ನೀಡಿದ ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರು ಶನಿವಾರ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಭೇಟಿ ನೀಡಿದರು.

ಶನಿವಾರ ಬೆಳಗಿನ ಜಾವ ಮೆಸ್ಸಿ ಕೋಲ್ಕತ್ತಾ ಏರ್ಪೋರ್ಟ್ಗೆ ಆಗಮಿಸಿದಾಗ ಅವರನ್ನು ನೋಡಲು ಕೋಲ್ಕತ್ತಾದಿಂದ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಪ್ರೇಕ್ಷಕರು ತಮ್ಮ ನೆಚ್ಚಿನ ಫುಟ್ಬಾಲ್ ತಾರೆಯನ್ನು ನೋಡಲು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದರಿಂದ ಪರ್ಯಾಯ ಮಾರ್ಗದ ಮೂಲಕ ವಿಮಾನ ನಿಲ್ದಾಣದಿಂದ ಹೊರಗೆ ಕರೆದೊಯ್ಯಲಾಯಿತು.

ಮೆಸ್ಸಿ ಅವರೊಂದಿಗೆ ದೀರ್ಘಕಾಲದ ಸ್ಟ್ರೈಕ್ ಪಾಲುದಾರ ಲೂಯಿಸ್ ಸುವಾರೆಜ್ ಮತ್ತು ಅರ್ಜೆಂಟೀನಾ ತಂಡದ ಸಹ ಆಟಗಾರ ರೊಡ್ರಿಗೋ ಡಿ.ಪಾಲ್ ಜೊತೆಗಿದ್ದರು.
ಕೊಲ್ಕತ್ತಾ ನಗರದ ಪ್ರಮುಖ ಸ್ಥಳಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು, ಅಭಿಮಾನಿಗಳು ಫುಟ್ಬಾಲ್ ಐಕಾನ್ ಅನ್ನು ಒಂದು ಕ್ಷಣ ನೋಡಲು ಉತ್ಸುಕರಾಗಿದ್ದರು.

ಮುಂದಿನ 72 ಗಂಟೆಗಳಲ್ಲಿ, ಅವರು ಕೋಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ದೆಹಲಿಯಾದ್ಯಂತ ಸಂಚರಿಸಿ, ಮುಖ್ಯಮಂತ್ರಿಗಳು, ಕಾರ್ಪೊರೇಟ್ ನಾಯಕರು, ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ.
ಪ್ರೇಕ್ಷಕರಿಂದ ‘ನಮಗೆ ಮೆಸ್ಸಿ ಬೇಕು’ ಎಂದು ಘೋಷಣೆ, ಪೊಲೀಸರಿಂದ ಲಾಠಿ ರುಚಿ

ಲಿಯೋನೆಲ್ ಮೆಸ್ಸಿ ಕ್ರೀಡಾಂಗಣಕ್ಕೆ ಪ್ರವೇಶಿಸಿದ ತಕ್ಷಣ, ಆಯೋಜಕರು,ರಾಜ್ಯ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಮತ್ತು ಫುಟ್ಬಾಲ್ ಕ್ಲಬ್ಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು 70 ರಿಂದ 80 ಜನರ ಗುಂಪು ಅವರನ್ನು ಸುತ್ತುವರೆದಿತ್ತು.ಜನಸಮೂಹ ಫುಟ್ಬಾಲ್ ತಾರೆಯಿಂದ ಸೆಲ್ಫಿ ಮತ್ತು ಆಟೋಗ್ರಾಫ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರು, ಅಲ್ಲದೆ ಪ್ರೇಕ್ಷಕರಿಗೆ ಮೆಸ್ಸಿ ಮತ್ತು ಇತರ ಇಬ್ಬರು ಫುಟ್ಬಾಲ್ ಆಟಗಾರರನ್ನು ಗ್ಯಾಲರಿಗಳಿಂದ ನೋಡಲು ಸಾಧ್ಯವಾಗಲಿಲ್ಲ.ಒಂದು ಹಂತದಲ್ಲಿ ಕೋಪಗೊಂಡ ಫುಟ್ಬಾಲ್ ಅಭಿಮಾನಿಗಳು ‘ನಮಗೆ ಮೆಸ್ಸಿ ಬೇಕು’ ಎಂದು ಘೋಷಣೆ ಕೂಗಲು ಪ್ರಾರಂಭಿಸಿದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಾಲಿವುಡ್ ನಟ ಶಾರುಖ್ ಖಾನ್ ಕ್ರೀಡಾಂಗಣಕ್ಕೆ ಬರುವ ಮೊದಲೇ ಲಿಯೋನೆಲ್ ಮೆಸ್ಸಿಯನ್ನು ಕ್ರೀಡಾಂಗಣದಿಂದ ಹೊರಗೆ ಕರೆದೊಯ್ಯಲಾಯಿತು. ಪ್ರೇಕ್ಷಕರ ದಾಂಧಲೆಯಿಂದಾಗಿ ಕಾರ್ಯಕ್ರಮವನ್ನು ಕೇವಲ ಹತ್ತೇ ನಿಮಿಷಕ್ಕೆ ಮೊಟಕು ಗೊಳಿಸಲಾಯಿತು.

ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿದರೂ ತಮ್ಮ ನೆಚ್ಚಿನ ತಾರೆಯ ದರ್ಶನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಫುಟ್ಬಾಲ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಕೆಲವೇ ನಿಮಿಷಗಳಲ್ಲಿ ಕೋಪಗೊಂಡ ಫುಟ್ಬಾಲ್ ಅಭಿಮಾನಿಗಳು ಗ್ಯಾಲರಿಯಲ್ಲಿ ಕುರ್ಚಿಗಳನ್ನು ಒಡೆದು ಮೈದಾನದ ಮೇಲೆ ಎಸೆಯಲು ಪ್ರಾರಂಭಿಸಿದರು. ಬಾಟಲಿಗಳು ಮೈದಾನದ ಮೇಲೆ ಬೀಳಲು ಪ್ರಾರಂಭಿಸಿದವು.

ಜನರು ಮೈದಾನದ ಅಂಚಿನಲ್ಲಿರುವ ಬೇಲಿ ಗೇಟ್ ಅನ್ನು ಮುರಿದು ದೊಡ್ಡ ಸಂಖ್ಯೆಯಲ್ಲಿ ಮೈದಾನದೊಳಗೆ ಪ್ರವೇಶಿಸಿದರು. ನೂರಾರು ಜನರು ಕ್ರೀಡಾಂಗಣವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಮೈದಾನದಲ್ಲಿನ ತಾತ್ಕಾಲಿಕ ಬ್ಯಾರಿಕೇಡ್ ಗಳನ್ನು ಉರುಳಿಸಿದರು. ಪ್ರೇಕ್ಷಕರು ಕ್ರೀಡಾಂಗಣದೊಳಗಿನ ತಾತ್ಕಾಲಿಕ ಬ್ಯಾರೀಕೆಡ್
ಗಳಿಗೂ ಬೆಂಕಿ ಹಚ್ಚಿದರು.



ಪೊಲೀಸ್ ಸಿಬ್ಬಂದಿ ಗುಂಪನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸಿದರು ಆದರೆ ಅವರ ಸಂಖ್ಯೆ ಹೆಚ್ಚಿರಲಿಲ್ಲ. ಫುಟ್ಬಾಲ್ ಕ್ರೀಡಾಂಗಣದಲ್ಲಿ ಹಲವಾರು ನಿಮಿಷಗಳ ಕಾಲ ಅವ್ಯವಸ್ಥೆ ಉಂಟಾಯಿತು. ಕ್ರೀಡಾಂಗಣದ ಹೊರಗೆ ಸಾವಿರಾರು ಫುಟ್ಬಾಲ್ ಅಭಿಮಾನಿಗಳು ಜಮಾಯಿಸಿ ಆಡಳಿತ ಮತ್ತು ಸಂಘಟಕರ ವಿರುದ್ಧ ಘೋಷಣೆ ಕೂಗಿದರು. ಗುಂಪನ್ನು ನಿಯಂತ್ರಿಸಲು ಪೋಲಿಸರು ಲಾಠಿ ಪ್ರಹಾರ ನಡೆಸಿದರು.

