ಲಾತೂರು : ಮಹಾರಾಷ್ಟ್ರದ ಲಾತೂರ್ನಲ್ಲಿ ಐಸಿಐಸಿಐ ಬ್ಯಾಂಕ್ ವಸೂಲಾತಿ ಏಜೆಂಟ್ ಒಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಗೋಣಿಚೀಲದಲ್ಲಿ ಕಟ್ಟಿ, ಅವರ ಕಾರಿನೊಂದಿಗೆ ಜೀವಂತವಾಗಿ ಸುಟ್ಟುಹಾಕಲಾಗಿದೆ.

ಮಹಾರಾಷ್ಟ್ರದ ಲಾತೂರ್ನ ಔಸಾ ತಾಲ್ಲೂಕಿನ ವನವಾಡ ರಸ್ತೆಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಸುಟ್ಟ ಕಾರಿನಲ್ಲಿ ಮೃತದೇಹ ಪತ್ತೆಯಾಗಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ನಂತರ ಕಾರಿನಿಂದ ಹೊರತೆಗೆದ ಶವವನ್ನು ಔಸಾ ತಾಂಡಾ ನಿವಾಸಿ ಗಣೇಶ್ ಚವಾಣ್ ಎಂದು ಗುರುತಿಸಲಾಗಿದೆ. ಯುವಕನನ್ನು ಚೀಲದಲ್ಲಿ ಕಟ್ಟಿ ಕಾರಿನೊಳಗೆ ಹಾಕಿ ನಂತರ ಕಾರಿಗೆ ಬೆಂಕಿ ಹಚ್ಚಲಾಗಿದೆ ಎಂದು ಹೇಳಲಾಗಿದೆ.
ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಕೊಲೆಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.

ಪೊಲೀಸ್ ಅಧಿಕಾರಿಯ ಪ್ರಕಾರ, “ವನವಾಡ ರಸ್ತೆಯಲ್ಲಿ ವಾಹನವೊಂದು ಬೆಂಕಿಗೆ ಆಹುತಿಯಾಗಿದೆ ಎಂದು ಶನಿವಾರ ಮಧ್ಯಾಹ್ನ 12:30 ರ ಸುಮಾರಿಗೆ ಕರೆ ಬಂದಿತು. ನಮ್ಮ ಸಿಬ್ಬಂದಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ಬಂದರು. ನಂತರ ಅವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ವಾಹನದ ಬೆಂಕಿಯನ್ನು ನಂದಿಸಿದರು.ಬೆಂಕಿಯನ್ನು ನಂದಿಸಿದ ನಂತರ, ವಾಹನದೊಳಗೆ ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾದ ಶವವನ್ನು ಕಂಡುಕೊಂಡರು.ನಾವು ವೈದ್ಯಕೀಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದೇವೆ.ನಂತರ ಕುಟುಂಬ ಸದಸ್ಯರು ಉಂಗುರ ಸೇರಿದಂತೆ ವೈಯಕ್ತಿಕ ವಸ್ತುಗಳ ಸಹಾಯದಿಂದ ಮ್ರತ ವ್ಯಕ್ತಿಯನ್ನು ಗುರುತಿಸಿದರು. ಗುರುತನ್ನು ಅಧಿಕೃತವಾಗಿ ದೃಢೀಕರಿಸಲು ಡಿಎನ್ಎ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ

