ಬೆಂಗಳೂರು : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹಭಾಗಿತ್ವದ ಜನಪ್ರಿಯ ಐಷಾರಾಮಿ ರೆಸ್ಟೋರೆಂಟ್ ಮತ್ತು ಪಬ್ ಬ್ಯಾಸ್ಟಿಯನ್ ಮೇಲೆ ಮುಂಬೈ ಐಟಿ ಅಧಿಕಾರಿಗಳು ಅಕ್ರಮ ವಹಿವಾಟು,ತೆರಿಗೆ ವಂಚನೆ, ಹಣದ ವರ್ಗಾವಣೆ ಆರೋಪದಡಿಯಲ್ಲಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಈ ದಾಳಿಯು ಡಿಸೆಂಬರ್ 17ರಂದು ನಡೆದಿದೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್ ಬಳಿ ಇರುವ ಈ ಪಬ್ ಬೆಂಗಳೂರಿನ ಅತ್ಯಂತ ದುಬಾರಿ ಮತ್ತು ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ.

ಶಿಲ್ಪಾ ಶೆಟ್ಟಿ 2019ರಲ್ಲಿ ರಂಜಿತ್ ಬಿಂದ್ರಾ ಅವರೊಂದಿಗೆ ಸಹಭಾಗಿತ್ವದಲ್ಲಿ ಈ ಬ್ರ್ಯಾಂಡ್ಗೆ ಸೇರ್ಪಡೆಗೊಂಡರು. ಮುಂಬೈ,ಗೋವಾ,ಪುಣೆ ಮತ್ತು ಬೆಂಗಳೂರಿನಲ್ಲಿ ಶಾಖೆಗಳನ್ನು ಹೊಂದಿರುವ ಬ್ಯಾಸ್ಟಿಯನ್ ಅತ್ಯಂತ ದುಬಾರಿ ಮೆನುಗಳಿಗೆ ಹೆಸರುವಾಸಿಯಾಗಿದೆ
ಇಲ್ಲಿ ಜಾಸ್ಮಿನ್ ಟೀಗೆ 920 ರೂ, ಸಲಾಡ್ಗೆ 1000 ರೂ, ಮತ್ತು ಚಾಂಪೇನ್ ಬಾಟಲ್ಗೆ 1.59 ಲಕ್ಷ ರೂಪಾಯಿ ವರೆಗೆ ಬೆಲೆಯಿದೆ.ಮುಂಬೈ ಶಾಖೆಯು ದಿನಕ್ಕೆ 2-3 ಕೋಟಿ ಆದಾಯ ಗಳಿಸುತ್ತಿತ್ತು ಎಂಬ ಮಾಹಿತಿಯಿದೆ.

ಕಳೆದ ವಾರ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಈ ಐಷಾರಾಮಿ ಪಬ್ ಗೆ ಭೇಟಿ ಕೊಟ್ಟಿದ್ದ ಆ ವೇಳೆ ಆಶ್ಲೀಲ ಕೈ ಸನ್ನೆ ಮಾಡಿದ ಆರೋಪ ಮೇಲೆ ಆತನ ವಿರುದ್ದ ಕೇಸು ದಾಖಲಾಗಿತ್ತು.
ಅಲ್ಲದೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಸತ್ಯ ನಾಯ್ಡು ಅವರು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಬಿಲ್ ಪಾವತಿಯಲ್ಲಿ ಗೊಂದಲದಿಂದ ಆರಂಭವಾದ ಈ ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಾತ್ರಿ 1:30ಕ್ಕೆ ಮೀರಿ ಪಬ್ ತೆರೆದಿರಿಸಿಕೊಂಡಿದ್ದಕ್ಕಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಈಗ ಐಟಿ ದಾಳಿಯು ಪಬ್ಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ದಾಳಿಯ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ.ತೆರಿಗೆ ಅಧಿಕಾರಿಗಳು ಇನ್ನೂ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಿಲ್ಲ, ಮತ್ತು ಪ್ರಕ್ರಿಯೆ ಪೂರ್ಣಗೊಂಡ ನಂತರ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

