ಮುಂಬೈ: 98ನೇ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಗಿದ್ದ ನೀರಜ್ ಘಯ್ವಾನ್ ನಿರ್ದೇಶನದ ‘ಹೋಮ್ ಬೌಂಡ್’ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು, ಆಸ್ಕರ್ ನಾಮನಿರ್ದೇಶನಕ್ಕೆ ಒಂದು ಹೆಜ್ಜೆ ಹತ್ತಿರವಾಗಿದೆ.

ಸೆಪ್ಟೆಂಬರ್ 2025 ರಲ್ಲಿ, ಪುಷ್ಪ 2, ಸಂಕ್ರಾಂತಿಕಿ ವಸ್ತುನ್ನಂ, ಕಣ್ಣಪ್ಪ, ಮತ್ತು ಕುಬೇರ ಮುಂತಾದ ಕೆಲವು ತೆಲುಗು ಚಲನಚಿತ್ರಗಳನ್ನು ಒಳಗೊಂಡಂತೆ ಇಪ್ಪತ್ತನಾಲ್ಕು ಚಲನಚಿತ್ರಗಳನ್ನು ಪರಿಗಣಿಸಿದ ನಂತರ, ಆಯ್ಕೆ ಸಮಿತಿಯು ನೀರಜ್ ಘಯ್ವಾನ್ ಅವರ ಹಿಂದಿ ಚಲನಚಿತ್ರ ಹೋಮ್ಬೌಂಡ್ 2026ರ ಆಸ್ಕರ್ಗೆ ಭಾರತದ ಅಧಿಕೃತ ಪ್ರವೇಶವಾಗಿದೆ ಎಂದು ಘೋಷಿಸಿತು.
ಇಶಾನ್ ಖಟ್ಟರ್ ಮತ್ತು ವಿಶಾಲ್ ಜೇಥ್ವಾ ನಟಿಸಿರುವ ‘ಹೋಮ್ಬೌಂಡ್’ ಚಿತ್ರವು ಮುಂದಿನ ಮತ್ತು ಅಂತಿಮ ಸುತ್ತಿನ ಮತದಾನಕ್ಕೆ ಅರ್ಹತೆ ಪಡೆದ 86 ದೇಶಗಳಿಂದ ಆಯ್ಕೆಯಾದ 15 ಚಿತ್ರಗಳಲ್ಲಿ ಒಂದಾಗಿದೆ. ಈ ಘೋಷಣೆಯನ್ನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ದೃಢಪಡಿಸಿದೆ.

98ನೇ ಅಕಾಡೆಮಿ ಪ್ರಶಸ್ತಿಗಳಿಗಾಗಿ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಮುಂದಿನ ಸುತ್ತಿನ ಮತದಾನಕ್ಕೆ ಆಯ್ಕೆಯಾದ 15 ಚಿತ್ರಗಳಲ್ಲಿ ಅರ್ಜೆಂಟೀನಾದ ಬೆಲೆನ್, ಬ್ರೆಜಿಲ್ನ ದಿ ಸೀಕ್ರೆಟ್ ಏಜೆಂಟ್, ಫ್ರಾನ್ಸ್ನ ಇಟ್ ವಾಸ್ ಜಸ್ಟ್ ಆನ್ ಆಕ್ಸಿಡೆಂಟ್, ಜರ್ಮನಿಯ ಸೌಂಡ್ ಆಫ್ ಫಾಲಿಂಗ್, ಇರಾಕ್ನ ದಿ ಪ್ರೆಸಿಡೆಂಟ್ಸ್ ಕೇಕ್, ಜಪಾನ್ನ ಕೊಕುಹೊ, ಜೋರ್ಡಾನ್ನ ಆಲ್ ದಟ್ಸ್ ಲೆಫ್ಟ್ ಆಫ್ ಯು, ನಾರ್ವೆಯ ಸೆಂಟಿಮೆಂಟಲ್ ವ್ಯಾಲ್ಯೂ, ಪ್ಯಾಲೆಸ್ಟೈನ್ನ- ಪ್ಯಾಲೆಸ್ಟೈನ್ 36, ದಕ್ಷಿಣ ಕೊರಿಯಾದ ನೋ ಅದರ್ ಚಾಯ್ಸ್, ಸ್ಪೇನ್ನ ಸಿರಾಟ್, ಸ್ವಿಟ್ಜರ್ಲ್ಯಾಂಡ್ನ ಲೇಟ್ ಶಿಫ್ಟ್, ತೈವಾನ್ನ ಲೆಫ್ಟ್ ಹ್ಯಾಂಡೆಡ್ ಗರ್ಲ್ ,ಟುನೀಶಿಯಾದ ದಿ ವಾಯ್ಸ್ ಆಫ್ ಹಿಂದ್ ರಜಬ್ ಮತ್ತು ಭಾರತದ ಹೋಮ್ ಬೌಂಡ್ ಸೇರಿವೆ.ಈ ವಿಭಾಗವನ್ನು ಆಯ್ಕೆ ಮಾಡುವ ಮತದಾರರು ತಮ್ಮ ಆಯ್ಕೆ ಮಾಡುವ ಮೊದಲು ಎಲ್ಲಾ 15 ಚಲನಚಿತ್ರಗಳನ್ನು ನೋಡಬೇಕಾಗುತ್ತದೆ.

ನೀರಜ್ ಘಯ್ವಾನ್ ನಿರ್ದೇಶನದ ‘ಹೋಮ್ಬೌಂಡ್’ ಚಿತ್ರವು,ಈ ಚಿತ್ರವು ಒಂದು ನೈಜ ಘಟನೆಯಿಂದ ಪ್ರೇರಿತವಾಗಿದ್ದು, ಬಾಲ್ಯದ ಸ್ನೇಹಿತರಾದ ಶೋಯೆಬ್ (ಇಶಾನ್ ಖಟ್ಟರ್) ಮತ್ತು ಚಂದನ್ (ವಿಶಾಲ್ ಜೆಥ್ವಾ) ಸುತ್ತ ಸುತ್ತುತ್ತದೆ. ರಾಷ್ಟ್ರೀಯ ಪೊಲೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಶ್ರಮಿಸುವ ಇಬ್ಬರು ಬಾಲ್ಯದ ಸ್ನೇಹಿತರ ಕಥೆಯಾಗಿದ್ದು, ಇದು ಅವರಿಗೆ ಘನತೆ ಮತ್ತು ಸ್ಥಿರತೆಯನ್ನು ತರುವ ವೃತ್ತಿ ಮಾರ್ಗವಾಗಿದೆ. ಈ ಚಿತ್ರವು ಜಾತಿವಾದದಂತಹ ಭಾರತದ ಪ್ರಮುಖ ಸಮಸ್ಯೆಗಳನ್ನು ಸಹ ಸ್ಪರ್ಶಿಸಿದೆ.

