ಇಂದೋರ್ : ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ಒಂದು ಮದುವೆ ಈಗ ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಶಾಸಕ ರಾಕೇಶ್ ಅಲಿಯಾಸ್ ಗೋಲು ಶುಕ್ಲಾ ಅವರ ಮಗ ಅಂಜನೇಶ್ ರವರ ಮದುವೆ ತುಂಬಾ ಅದ್ದೂರಿಯಾಗಿ ಮತ್ತು ವೈಭವದಿಂದ ಕೂಡಿತ್ತು, ಅದು ಜನರನ್ನು ಬೆರಗುಗೊಳಿಸಿತು. ವಿವಾಹ ಸಮಾರಂಭವು ತುಂಬಾ ವಿಶೇಷವಾಗಿದ್ದರಿಂದ ದೂರದೂರದ ಜನರು ಅದನ್ನು ವೀಕ್ಷಿಸಲು ಬಂದಿದ್ದರು ಮತ್ತು ಈ ಕಾರ್ಯಕ್ರಮವು ರಾಜ್ಯಾದಾದ್ಯಂತ ಚರ್ಚೆಗೆ ಗ್ರಾಸವಾಯಿತು.

ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಕೂಡ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಅವರೊಂದಿಗೆ ಹಲವಾರು ಹಿರಿಯ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಹಲವಾರು ಕಾಂಗ್ರೆಸ್ ನಾಯಕರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಧು-ವರರನ್ನು ಆಶೀರ್ವದಿಸಿದರು. ವಿವಿಧ ರಾಜಕೀಯ ಪಕ್ಷಗಳ ನಾಯಕರ ಉಪಸ್ಥಿತಿಯು ಈ ವಿವಾಹವನ್ನು ಇನ್ನಷ್ಟು ವಿಶೇಷವಾಗಿಸಿತು.

ಮೂಲಗಳ ಪ್ರಕಾರ, ಈ ಮದುವೆಯಲ್ಲಿ ಪಟಾಕಿಗಳಿಗಷ್ಟೇ ಸುಮಾರು 70 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಭವ್ಯವಾದ ಪಟಾಕಿ ಪ್ರದರ್ಶನವು ಇಡೀ ಆಕಾಶವನ್ನು ಬೆಳಗಿಸಿತು. ವರ್ಣರಂಜಿತ ದೀಪಗಳು ಮತ್ತು ಜೋರಾದ ಶಬ್ದಗಳನ್ನು ವೀಕ್ಷಿಸಲು ದೊಡ್ಡ ಜನಸಮೂಹ ಜಮಾಯಿಸಿತು. ಹಲವಾರು ಗಂಟೆಗಳ ಕಾಲ ನಡೆದ ಪಟಾಕಿ ಪ್ರದರ್ಶನವು ಎಲ್ಲರನ್ನೂ ಬೆರಗುಗೊಳಿಸಿದವು.

ಮದುವೆಯ ಪಟಾಕಿ ಸದ್ದು ಮತ್ತು ಅದ್ಧೂರಿ ಆಚರಣೆಯ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು ಜನರು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಪುತ್ರನ ಮದುವೆಯ ಪಟಾಕಿ ಸದ್ದು ಇದೀಗ ರಾಜ್ಯಾದ್ಯಂತ ಚರ್ಚೆಯ ವಿಷಯವಾಗಿದ್ದು.ಇಂದು ಮಧ್ಯಪ್ರದೇಶ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಭಾಗವಹಿಸಿದ ಗೋಲು ಶುಕ್ಲಾರನ್ನು ಮಾಧ್ಯಮದವರು ಪ್ರಶ್ನಿಸಿದಾಗ ಮಕ್ಕಳ ಮದುವೆಯ ಸಮಯದಲ್ಲಿ ಪಟಾಕಿಗಳನ್ನು ಸಿಡಿಸುವುದು ಸಾಮಾನ್ಯ. ಅವು ₹70 ಲಕ್ಷ ಅಥವಾ ₹70 ಕೋಟಿ ಮೌಲ್ಯದ್ದಾಗಿದ್ದರೂ ಪರವಾಗಿಲ್ಲ. ನಾವು ಮದುವೆ ಮೆರವಣಿಗೆಯನ್ನು ಅದ್ದೂರಿಯಾಗಿ ವಧುವಿನ ಮನೆಗೆ ಕೊಂಡೊಯ್ಯುತ್ತಿದ್ದೆವು. ವಧುವಿನ ಕುಟುಂಬವು ನಮ್ಮನ್ನು ತುಂಬಾ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಮಾಲಿನ್ಯದ ವಿಷಯದಲ್ಲಿ, ಪರಿಸರವನ್ನು ಶುದ್ಧೀಕರಿಸಲು ನಾವು ಇಂದೋರ್ನಲ್ಲಿ ಲಕ್ಷಾಂತರ ಮರಗಳನ್ನು ನೆಡುತ್ತಿದ್ದೇವೆ. ಪರಿಸರವು ತುಂಬಾ ಸ್ವಚ್ಛವಾಗಿದೆ ಎಂದರು.








