ಮಂಗಳೂರು : ಅಂಡರ್ವಾಟರ್ ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ (USFI) ವತಿಯಿಂದ 5ನೇ ರಾಷ್ಟ್ರೀಯ ಫಿನ್ಸ್ವಿಮ್ಮಿಂಗ್ ಚಾಂಪಿಯನ್ಶಿಪ್ – 2025 ಈಜು ಸ್ಪರ್ಧೆಯು ಡಿಸೆಂಬರ್ 19ರಿಂದ 22ರ ತನಕ ಮಂಗಳೂರಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಆಯೋಜಿಸಲಾಗಿದೆ ಎಂದು ಅಂಡರ್ ವಾಟರ್ ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ ಸೆಕ್ರೆಟರಿ ಜನರಲ್ ಡಾ. ತಪನ್ ಕುಮಾರ್ ಪಾಣಿಗ್ರಾಹಿ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ (ಭಾರತ ಸರ್ಕಾರ)ದಿಂದ ಮಾನ್ಯತೆ ಪಡೆದಿರುವ ಫಿಸಿಕಲ್ ಎಜುಕೇಶನ್ ಫೌಂಡೇಶನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಫಿನ್ಸ್ವಿಮ್ಮಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ಈ ಮಹತ್ವದ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ನಡೆಯಲಿದೆ ಎಂದರು.

ಈ ಸ್ಪರ್ಧೆಗೆ ದೇಶದಾದ್ಯಂತ 30 ರಾಜ್ಯಗಳ 400ಕ್ಕೂ ಹೆಚ್ಚು ಜಿಲ್ಲೆಗಳ 1400ಕ್ಕೂ ಹೆಚ್ಚು ಕ್ರೀಡಾಪಟುಗಳು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಈ ನಾಲ್ಕು ದಿನಗಳ ಕ್ರೀಡಾಕೂಟದಲ್ಲಿ ಎಲ್ಲಾ ವಯೋಮಾನದ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ 144 ಸ್ಪರ್ಧೆಗಳು ನಡೆಯಲಿದ್ದು, ಒಟ್ಟು 458 ಪದಕಗಳಿಗಾಗಿ ಪೈಪೋಟಿ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಂಡರ್ ವಾಟರ್ ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾದ ಖಜಾಂಚಿಯಾದ ಅಚಿಂತ ಕುಮಾರ್ ಪಂಡಿತ್ , ಸದಸ್ಯರಾದ ರಾಮರಾಜಿ , ರಿಹಾನ್ , ಬಿ ಪಿ ನಾಯಕ್ ಮುಂತಾದವರು ಉಪಸ್ಥಿತರಿದ್ದರು .

