ಮಂಗಳೂರು : ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆಯ ಜನ ಸಂಪರ್ಕ ಸಭೆ ಹಾಗೂ 15ನೇ ಸರ್ವ ಸದಸ್ಯರ ಮಹಾಸಭೆ ಡಿ.21ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಅಂಬೇಡ್ಕರ್ ವೃತ್ತ ಬಳಿಯ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯಲಿದೆ ಎಂದು ವೇದಿಕೆ ಸ್ಥಾಪಕ ಅಧ್ಯಕ್ಷ ಮ್ಯಾಕ್ಸಿಂ ಡಿಸಿಲ್ವ ತಿಳಿಸಿದ್ದಾರೆ .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ತಾವು ಅನುಭವಿಸಿಕೊಂಡು ಬರುತ್ತಿದ್ದ ಆಸ್ತಿಯ ಮೂಲಗೇಣಿ ಹಕ್ಕನ್ನು ಅನುಭವಿಸಲು ಬೇಕಾದ ಕಾನೂನಾತ್ಮಕ ಹೋರಾಟದ ಬಗ್ಗೆ ಜನರಿಗೆ ಸಭೆಯಲ್ಲಿ ಮಾಹಿತಿ ನೀಡಲಾಗುವುದು ತಿಳಿಸಿದರು .
ಈಗಾಗಲೇ ಹೈಕೋರ್ಟ್ ಮೂಲಗೇಣಿದಾರರ ಪರವಾಗಿ ತೀರ್ಪು ನೀಡಿದ್ದು, ಜನರಿಂದ ಭೂಮಿಯ ಆದಾಯವನ್ನು ಸಂಗ್ರಹಿಸುವ ಹಕ್ಕು ಮೂಲದಾರರಿಗೆ ಇದೆ ಮತ್ತು ಅವರು ಭೂಮಿಯ ಮಾಲೀಕರಲ್ಲ ಎಂದಿದೆ. ಆದರೆ, ಇದನ್ನು ಪ್ರಶ್ನಿಸಿ ಮೂಲದಾರರು ಹೈಕೋರ್ಟ್ನ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿರುವುದರಿಂದ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ.ಮುಂದಿನ ಕಾನೂನು ಹೋರಾಟಕ್ಕೆ ಎಲ್ಲ ಮೂಲಗೇಣಿದಾರರ ನೆರವಿನ ಅಗತ್ಯವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷ ಎಂ.ಕೆ.ಯಶೋಧರ್, ಉಪಾಧ್ಯಕ್ಷ ಜೋ ಮಾರ್ಟಿಸ್, ಕಾರ್ಯದರ್ಶಿ ರೊನಾಲ್ಡ್ ಡಿಸಿಲ್ವ, ಸಂದೇಶ್ ಉಪಸ್ಥಿತರಿದ್ದರು.

