ಮಂಗಳೂರು : ರಾಷ್ಟ್ರೀಯ ಓಪನ್/ಕ್ಲಾಸಿಕಲ್ ಪಿಡೇ ರೇಟೆಡ್ ಚೆಸ್ ಪಂದ್ಯಾವಳಿಯು ಡಿಸೆಂಬರ್ 26 ರಿಂದ 30 ರವರೆಗೆ ಮಂಗಳೂರಿನ ಉರ್ವಾಸ್ಟೋರ್ ಬಳಿಯಿರುವ ತುಳು ಭವನದ “ಅಮ್ರತ ಸೋಮೇಶ್ವರ” ಸಭಾಂಗಣದಲ್ಲಿ ನಿರಂತರ 5 ದಿನ 9 ಸುತ್ತುಗಳಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇದರ ಸಹಯೋಗದೊಂದಿಗೆ ನಡೆಯಲಿದೆ ಎಂದು ದ.ಕ ಜಿಲ್ಲಾ ಚೆಸ್ ಅಸೋಷಿಯೇಶನ್ ನ ಅಧ್ಯಕ್ಷರಾದ ಡಾ.ಅಮರಶ್ರೀ ಅಮರನಾಥ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಮ್ಮ ದೇಶದಲ್ಲಿ ಚೆಸ್ ದಿನೇ ದಿನೇ ಬಹಳ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದ್ದು, ಈಗ ನಮ್ಮ ದೇಶ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಅಲ್ಲದೇ, ವೈಯಕ್ತಿಕ ವಿಭಾಗದಲ್ಲಿಯೂ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು ಹೆಮ್ಮೆಯ ವಿಷಯವಾಗಿದೆ. ನಮ್ಮ ಜಿಲ್ಲೆಯು ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ಹೊಂದಿದೆ. ಚೆಸ್ ಆಟದ ಬೆಳವಣಿಗೆಯ ಪೂರಕವಾಗಿ ನಾವು ಈ ಪಂದ್ಯಾಟವನ್ನು ಹಮ್ಮಿಕೊಂಡಿದ್ದು, ಇದರಲ್ಲಿ, ಬೇರೆ ಬೇರೆ ರಾಜ್ಯಗಳ ಆಟಗಾರರು ಅಲ್ಲದೇ, ಅಂತಾರಾಷ್ಟ್ರೀಯ ಮಟ್ಟದ ಆಟಗಾರರ ಸಹಿತ ಸುಮಾರು 400 ಆಟಗಾರರು ಭಾಗವಹಿಸುವ ನಿರೀಕ್ಷೆಯಲ್ಲಿದ್ದೇವೆ ಎಂದರು.

ಮಂಗಳೂರು ನಗರ ಚೆಸ್ ಆಟದಲ್ಲಿ/ಪಂದ್ಯಾವಳಿಯಲ್ಲಿ ನಮ್ಮ ದೇಶಕ್ಕೇ ಮಾದರಿಯಾಗುತ್ತಾ,ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ ಹಾಗೂ ಉತ್ತಮ ಆಟಗಾರರನ್ನು ಪರಿಚಯಿಸುತ್ತಿದೆ. ಇದಕ್ಕೆ ಪೂರಕವಾಗಿ ನಮ್ಮ ಜಿಲ್ಲೆಯ ‘ಇಶಾ ಶರ್ಮ’ WGM(women’s Grand Master) ಆಗಿ ಹೊರ ಹೊಮ್ಮಿದ್ದು, ಇವರು ಕರ್ನಾಟಕದ ಪ್ರಥಮ ಮಹಿಳೆಯಾಗಿದ್ದಾರೆ ಎಂದರು.

ಕಾರ್ಯಕ್ರಮವು ಬೆಳಿಗ್ಗೆ 9:30ಕ್ಕೆ ಪ್ರಾರಂಭವಾಗಲಿದೆ. ಉದ್ಘಾಟನೆಯನ್ನು ಅಧಾನಿ ಸಮೂಹದ ಶ್ರೀ ಕಿಶೋರ್ ಆಳ್ವಾ ನೆರವೇರಿಸಲಿರುವರು.ಮುಖ್ಯ ಅತಿಥಿಗಳಾಗಿ, KSCA ಅಧ್ಯಕ್ಷ ಶ್ರೀ ಮದುಕರ್, ಉದ್ಯಮಿ ರವಿರಾಜ್ ಶೆಟ್ಟಿ, ಅನಿಲ್ ಲೋಬೋ ಅಧ್ಯಕ್ಷರು,MCC Bank, ಭಾಸ್ಕರ್ ರೈ ಕಟ್ಟ ಅಧ್ಯಕ್ಷರು ರೋಟರಿ ಕ್ಲಬ್ ಮಂಗಳೂರು ಹಾಗೂ ಹಲವಾರು ಗಣ್ಯರು ಭಾಗವಹಿಸಲಿರುವರು.
ತಾರೀಕು 30ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ.ಮೋಹನ ಆಳ್ವಾ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ಟೂರ್ನಿಯು 6 ಲಕ್ಷ ನಗದು ಬಹುಮಾನ, ಅಲ್ಲದೇ ವಿವಿಧ ವಿಭಾಗಗಳ ಟ್ರೋಫಿ ಜೊತೆಗೆ ಸುಮಾರು ಇನ್ನೂರು ಬಹುಮಾನಗಳು ಇರಲಿವೆ.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಸುನೀಲ್ ಆಚಾರ್ ಗೌರವಾಧ್ಯಕ್ಷರು, ಶ್ರೀ ರಮೇಶ್ ಕೋಟೆ, ಉಪಾಧ್ಯಕ್ಷರು KSCA, ಶ್ರೀ ಭಾಸ್ಕರ್ ರೈ,ಅಧ್ಯಕ್ಷರು ರೋಟರಿ ಕ್ಲಬ್,
ಶ್ರೀ ರಾಜಗೋಪಾಲ್ ರೈ, ಮಾಜಿ ಅಸಿಸ್ಟೆಂಟ್ ಗವರ್ನರ್, ರೋಟರಿ ಕ್ಲಬ್, ಶ್ರೀಮತಿ ವಾಣಿ ಎಸ್ ಪಣಿಕ್ಕರ್, ಉಪಾಧ್ಯಕ್ಷರು,ಶ್ರೀ ಸತ್ಯಪ್ರಸಾದ್, ಜತೆ ಕಾರ್ಯದರ್ಶಿ ಉಪಸ್ಥಿತರಿದ್ದರು.

