ಕೊಚ್ಚಿ : ಮಲಯಾಳಂ ಚಿತ್ರರಂಗದ ಖ್ಯಾತ ನಟ, ಬರಹಗಾರ, ನಿರ್ಮಾಪಕ,ನಿರ್ದೇಶಕರಾಗಿದ್ದ ಶ್ರೀನಿವಾಸನ್ ಶನಿವಾರ ನಿಧನರಾದರು, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಮಲಯಾಳಂ ಚಿತ್ರರಂಗದಲ್ಲಿ ತನ್ನ ನಟನೆಯ ಮೂಲಕ ಜನಪ್ರಿಯರಾಗಿದ್ದ ಅವರಿಗೆ 69 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉದಯಂಪೀರೂರಿನ ತಮ್ಮ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಡಯಾಲಿಸಿಸ್ಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಅವರ ಆರೋಗ್ಯದಲ್ಲಿ ದಿಡೀರ್ ಏರುಪೇರು ಕಂಡು ಬಂದ ಕಾರಣ ಕೂಡಲೇ ಅವರನ್ನು ತ್ರಿಪುಣಿತುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳಿಗ್ಗೆ 8.22 ಕ್ಕೆ ಅವರು ನಿಧನರಾದರು.
ಕೇರಳದ ಕಣ್ಣೂರು ಜಿಲ್ಲೆಯ ತಲಶ್ಶೇರಿ ಬಳಿಯ ಪಟ್ಯಂನಲ್ಲಿ ಏಪ್ರಿಲ್ 6, 1956 ರಂದು ಜನಿಸಿದ ಶ್ರೀನಿವಾಸನ್, ಮಲಯಾಳಂ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ನಟರಾಗಿ ಹೊರಹೊಮ್ಮಿದರು.1977 ರಲ್ಲಿ ಪಿಎ ಬ್ಯಾಕರ್ ಅವರ ಮಣಿಮುಳಕ್ಕಂ ಚಿತ್ರದ ಮೂಲಕ ಶ್ರೀನಿವಾಸನ್ ನಟನೆಗೆ ಪಾದಾರ್ಪಣೆ ಮಾಡಿದರು ಅವರು ಸುಮಾರು 225 ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಶ್ರೀನಿವಾಸನ್ ತಮ್ಮ ವೃತ್ತಿಜೀವನದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಎರಡು ಫಿಲ್ಮ್ಫೇರ್ ಪ್ರಶಸ್ತಿಗಳು ಆರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದಾರೆ. ಸಂದೇಶಂ ಮತ್ತು ಮಜಯೇತುಮ್ ಮುಂಪೆ ಚಿತ್ರಗಳಿಗೆ ಅವರು ಅತ್ಯುತ್ತಮ ಚಿತ್ರಕಥೆಗಾರನಿಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಅವರು ಪತ್ನಿ ವಿಮಲಾ ಶ್ರೀನಿವಾಸನ್ ಮತ್ತು ಇಬ್ಬರು ಪುತ್ರರಾದ ಗಾಯಕ, ನಟ, ನಿರ್ದೇಶಕ ಮತ್ತು ನಿರ್ಮಾಪಕ ವಿನೀತ್ ಶ್ರೀನಿವಾಸನ್,ಮತ್ತು ಧ್ಯಾನ್ ಶ್ರೀನಿವಾಸನ್ ಅವರನ್ನು ಅಗಲಿದ್ದಾರೆ.

