ಮಂಗಳೂರು : ಪ್ರತೀ ವರ್ಷದಂತೆ ಈ ವರ್ಷವು ಡಿಸೆಂಬರ್ 25 ರಂದು ಗೋಲ್ಡ್ ಫಿಂಚ್ ಮೈದಾನದಲ್ಲಿ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ “ನೆರವು” ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಈ ಯೋಜನೆಯನ್ನು ಆರಂಭ ಮಾಡಿದ ಮೊದಲ ವರ್ಷ ಒಟ್ಟು 1.25 ಕೋ.ರೂ. ನೆರವು ವಿತರಿಸಿದ್ದೇವೆ.ಆಗ 28 ಸಂಘ ಸಂಸ್ಥೆಗಳು ಪ್ರಯೋಜನ ಪಡೆದಿವೆ. ಈಗ 7ನೇ ವರ್ಷದಲ್ಲಿ 100ಕ್ಕೂ ಅಧಿಕ ಸಂಘ ಸಂಸ್ಥೆಗಳಿಗೆ ನೆರವು ವಿತರಣೆಯಾಗಲಿದೆ. ಸರಿಸುಮಾರು 4 ಸಾವಿರ ಕುಟುಂಬಗಳು ಈ ಕಾರ್ಯಕ್ರಮದಲ್ಲಿ “ನೆರವು ಬೆಂಬಲ ಪಡೆಯಲಿವೆ. 9.5 ಕೋ.ರೂ. ಗಳಿಗೂ ಅಧಿಕ ಮೊತ್ತ ವಿತರಿಸಲಾಗುತ್ತಿದೆ ಎಂದು ಎಂಆರ್ ಜೆ ಗ್ರೂಪಿನ ಮುಖ್ಯಸ್ಥರಾದ ಪ್ರಕಾಶ್ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜಾತಿ, ಧರ್ಮ, ಪಂಗಡ ಎಂಬ ಯಾವ ಮನುಷ್ಯ ನಿರ್ಮಿತ ಗಡಿಗಳಿಲ್ಲದೆ. ಅವಶ್ಯಕತೆ ಇರುವವರನ್ನು ನಮ್ಮ ತಂಡ ಹುಡುಕಿ, ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿದೆ. ಇಲ್ಲಿ ಅವಶ್ಯಕತೆಯೇ ಮಾನದಂಡವಾಗಿದೆ. ನಮಗೆ ವಿಶ್ವಾಸವಿದೆ -ಅನಿವಾರ್ಯತೆ ಇಲ್ಲದಿದ್ದರೆ ಯಾರೂ ಅರ್ಜಿ ಹಾಕುವುದಿಲ್ಲ. ದೈಹಿಕ ಸಮಸ್ಯೆ ಇರುವ ದಿವ್ಯಾಂಗರು, ಡಯಾಲಿಸ್ ಸಹಿತ ನಿರಂತರ ಚಿಕಿತ್ಸೆಯನ್ನು ಪಡೆಯಬೇಕಾದ ಅನಿವಾರ್ಯತೆ ಇರುವವರು, ಶಿಕ್ಷಣ ಮುಂದುವರಿಕೆಗೆ ನೆರವು ಬೇಕಾದವರು, ಸಿಂಗಲ್ ಪೇರೆಂಟ್ ಮಕ್ಕಳು, ಸಾಂಸ್ಕೃತಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ನೆರವಿನ ಬೆಂಬಲ ಪಡೆಯಲಿದ್ದಾರೆ. ಮನೆ ಕಟ್ಟಿ ಅದರ ಗೃಹ ಪ್ರವೇಶಕ್ಕಾಗಿ ಕಾಯುತ್ತಿರುವವರಿಗೂ ಅವರ ಭಾವನಾತ್ಮಕ ಮತ್ತು ಹಣಕಾಸಿನ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ ನೆರವು ಕೊಡಲಾಗುತ್ತಿದೆ. ಮನೆ ಕಟ್ಟಲು ಸಹಾಯ ಕೋರಿದ ಅರ್ಜಿಗಳನ್ನು ಪುರಸ್ಕರಿಸಲಾಗಿದೆ ಎಂದರು.

ಫಲಾನುಭವಿಗಳ ಆಯ್ಕೆಯಲ್ಲಿ ಪ್ರಾದೇಶಿಕತೆಯನ್ನೂ ಗಮನಿಸಲಾಗಿದೆ. ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಕೊಪ್ಪ, ಸಕಲೇಶಪುರ ಮತ್ತು ನಮ್ಮ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗಿದೆ. ನಾವು ಆಯ್ಕೆಗೆ ಸಂಬಂಧಿಸಿ ಸ್ವಾಯತ್ತ ಸಮಿತಿಯನ್ನು ಹೊಂದಿದ್ದೇವೆ, ಎಲ್ಲ ಜವಾಬ್ದಾರಿಯನ್ನೂ ಅದು ನಿಭಾಯಿಸುತ್ತದೆ ಎಂದರು.
ನೆರವು ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳನ್ನು ಕರೆತರಲು ಬಸ್ ಹಾಗೂ ಕಾರಿನ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗಿದೆ.ಅರ್ಹರಿಗೆ ಚೆಕ್ ಗಳನ್ನು ಮೈದಾನದಲ್ಲಿ ತೆರೆಯಲಾದ ಕೌಂಟರ್ ನಲ್ಲಿಯೇ ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಕಾರ್ಯಕ್ರಮದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ.

ವರ್ಷಂಪ್ರತಿಯಂತೆ ಈ ವರ್ಷವೂ ಸಾಧಕರನ್ನು ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ವಿಧಾನ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಅವರು ಪಾಲ್ಗೊಳ್ಳುತ್ತಾರೆ. ಚಲನ ಚಿತ್ರ ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾಗವಹಿಸುತ್ತಾರೆ. ಮೂಡಬಿದ್ರೆಯ ಆಳ್ವಾಸ್ ಎಜುಕೇಷನ್ ಟ್ರಸ್ಟ್ನ ಡಾ. ಮೋಹನ್ ಆಳ್ವ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ.ಗ್ರೂಪಿನ ಗೌರವ್ ಪಿ. ಶೆಟ್ಟಿ ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

