ಬೆಂಗಳೂರು : 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು ಜನವರಿ.29 ರಿಂದ ಫೆ. 6 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಬ್ರಾಂಡ್ ರಾಯಭಾರಿಯಾಗಿ ಹಿರಿಯ ಚಲನಚಿತ್ರ ಕಲಾವಿದ, ನಿರ್ದೇಶಕ ಮತ್ತು ನಿರ್ಮಾಪಕ ಪ್ರಕಾಶ್ ರಾಜ್ ಅವರನ್ನು ನೇಮಿಸಲಾಗಿದೆ ಎಂದರು.

ಈ ವರ್ಷ ಚಲನಚಿತ್ರೋತ್ಸವವು ಮಹಿಳಾ ಸಬಲೀಕರಣದ ವಿಷಯವನ್ನು ಆಧರಿಸಿರಲಿದೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಉದ್ಘಾಟನೆಯಾಗಲಿದೆ. ನಾನೇ ಉದ್ಘಾಟನೆ ಮಾಡ್ತೀನಿ ಎಂದು ಮುಖ್ಯಮಂತ್ರಿಗಳು ಹೇಳಿದರು.

ಚಲನಚಿತ್ರೋತ್ಸವದ ಏಷ್ಯನ್, ಭಾರತೀಯ ಮತ್ತು ಕನ್ನಡ ಸಿನಿಮಾ ಸ್ಪರ್ಧಾತ್ಮಕ ವಿಭಾಗಗಳಲ್ಲಿನ ಚಲನಚಿತ್ರಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ, ಈ ಮೂರು ವಿಭಾಗಗಳಿಗೆ ಇದುವರೆಗೆ 110 ಕ್ಕೂ ಹೆಚ್ಚು ಚಲನಚಿತ್ರಗಳು ಸಲ್ಲಿಕೆಯಾಗಿವೆ.ಚಲನಚಿತ್ರಗಳ ಸ್ಪರ್ಧಾತ್ಮಕ ವಿಭಾಗಗಳಿಗೆ ಅರ್ಜಿಗಳನ್ನು ಸಲ್ಲಿಸಲು ಡಿ.31ರಂದು ಕೊನೆಯ ದಿನವಾಗಿರುತ್ತದೆ.

17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ರಾಜಾಜಿನಗರದ ಲುಲು ಮಾಲ್ನಲ್ಲಿಯೂ ಪ್ರದರ್ಶನಗೊಳ್ಳಲಿದೆ. ಡಾ.ರಾಜ್ಕುಮಾರ್ ಭವನ, ಕಲಾವಿದರ ಸಂಘ, ಚಾಮರಾಜಪೇಟೆ ಮತ್ತು ಬನಶಂಕರಿಯಲ್ಲಿರುವ ಸುಚಿತ್ರಾ ಫಿಲಂ ಸೊಸೈಟಿ ಚಿತ್ರಮಂದಿರಗಳು.ರಾಜಾಜಿನಗರದ ಲುಲು ಮಾಲ್ನಲ್ಲಿರುವ ಸಿನೆಪೊಲಿಸ್ನ 11 ಪರದೆಗಳಲ್ಲಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಕನ್ನಡ ಮತ್ತು ಭಾರತೀಯ ಚಲನಚಿತ್ರಗಳು ಸೇರಿದಂತೆ 60 ಕ್ಕೂ ಹೆಚ್ಚು ದೇಶಗಳ 200 ಕ್ಕೂ ಹೆಚ್ಚು ಚಲನಚಿತ್ರಗಳ 400 ಕ್ಕೂ ಹೆಚ್ಚು ಪ್ರದರ್ಶನಗಳು ಇರಲಿವೆ.

ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಏರ್ಪಡಿಸಲು ರೂ. 7 ಕೋಟಿ ರೂಪಾಯಿಗಳ ಅಗತ್ಯವಿರುವ ಅನುದಾನ ಒದಗಿಸಲಾಗಿದೆ. ಸಮಾರೋಪ ಸಮಾರಂಭ ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.


