ಧಾರವಾಡ : ಬೆಳಗಾವಿ ವಿಭಾಗ ವ್ಯಾಪ್ತಿಯ ಎಲ್ಲಾ ಬಿಇಓ ಮತ್ತು ಡಿಡಿಪಿಐ ಕಚೇರಿಗಳಲ್ಲಿ ಪಾರದರ್ಶಕ ಮತ್ತು ತ್ವರಿತಗತಿಯ ಕಡತ ವಿಲೇವಾರಿ ಮತ್ತು ಆಡಳಿತದ ಕಾರ್ಯನಿರ್ವಹಣೆಗೆ ಪೂರಕವಾಗಿ ಇ-ಆಫೀಸ್ ಕಡ್ಡಾಯ ಅನುಷ್ಠಾನಗೊಳಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅವರು ಬುಧವಾರ ಇಲ್ಲಿಯ ಡಯಟ್ ಡೆಪ್ಯೂಟಿ ಚೆನ್ನಬಸಪ್ಪ ಸಮಾವೇಶ ಭವನದಲ್ಲಿ ಜರುಗಿದ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ 9 ಜಿಲ್ಲೆಗಳ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಬೆಳಗಾವಿ ವಿಭಾಗದ 59 ತಾಲೂಕುಗಳ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 3 ರಿಂದ 10ನೆಯ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಜನವರಿ ಅಂತ್ಯದೊಳಗಾಗಿ ಮೂಲಭೂತ ಭಾಷಾಜ್ಞಾನ ಮತ್ತು ಸಂಖ್ಯಾಜ್ಞಾನ (Fundamental Literacy and Numeracy) ಗಳಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಗುರಿ ನೀಡಲಾಯಿತು.ಇಲಾಖೆಯ ಮಹತ್ವದ ಕಾರ್ಯಕ್ರಮಗಳಾದ ಎಫ್.ಎಲ್.ಎನ್, ಎಲ್.ಬಿ. ನಿಖರ ಅನುಷ್ಠಾನ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100ರಷ್ಟು ಫಲಿತಾಂಶ ಸಾಧಿಸುವಂತೆ ಮಾಡಲು 29 ಅಂಶಗಳ ಕಾರ್ಯಕ್ರಮ ಅನುಷ್ಠಾನ ಹಾಗೂ ಮಿಷನ್ 40+ ಗುರಿಯೊಂದಿಗೆ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ವಿಷಯ ಶಿಕ್ಷಕರು ಕಾರ್ಯನಿರ್ವಹಿಸುವಂತೆ ಬಿಇಓ ಮತ್ತು ಡಿಡಿಪಿಐ ಅನುಪಾಲನೆ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಧ್ಯಾಹ್ನ ಉಪಹಾರ : ಶಾಲಾ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ನೀಡಲಾಗುತ್ತಿರುವ ಮಧ್ಯಾಹ್ನ ಉಪಹಾರವು ಸಂಪೂರ್ಣ ಶುಚಿ-ರುಚಿಯಾಗಿರುವಂತೆ ಎಲ್ಲರೂ ಗಮನಹರಿಸಬೇಕು. ಜೊತೆಗೆ ಆಹಾರ ಧಾನ್ಯಗಳ ಸುರಕ್ಷತೆ ಬಗ್ಗೆ ಗಮನಹರಿಸುವಂತೆ ಸೂಚಿಸಿ, ಈ ಕುರಿತು ಪ್ರಮಾದಗಳು ಕಂಡು ಬಂದರೆ ತಪ್ಪಿತಸ್ಥರಿಗೆ ಕಠಿಣ ಶಿಸ್ತುಕ್ರಮ ಕೈಕೊಳ್ಳುವಲ್ಲಿ ಹಿಂದೇಟು ಹಾಕುವುದಿಲ್ಲ ಎಂದೂ ಡಾ.ಈಶ್ವರ ಉಳ್ಳಾಗಡ್ಡಿ ಎಚ್ಚರಿಸಿದರು.
ಅಪರ ಆಯುಕ್ತರ ಕಚೇರಿಯ ನಿರ್ದೇಶಕ ಈಶ್ವರ ನಾಯ್ಕ, ಸಹನಿರ್ದೇಶಕಿ ಜಯಶ್ರೀ ಕಾರೇಕರ, ಉಪನಿರ್ದೇಶಕ ಗಿರೀಶ ಪದಕಿ, ಸಾರ್ವಜನಿಕ ಸಂಪರ್ಕಾಧಿಕಾರಿ ಸುಜಾತಾ ತಿಮ್ಮಾಪೂರ ಇದ್ದರು. ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಳಗಾವಿ, ವಿಜಯಪೂರ, ಬಾಗಲಕೋಟ, ಧಾರವಾಡ, ಗದಗ, ಹಾವೇರಿ, ಉತ್ತರಕನ್ನಡ, ಶಿರಸಿ ಮತ್ತು ಚಿಕ್ಕೋಡಿ ಜಿಲ್ಲೆಗಳ 59 ಕ್ಷೇತ್ರ ಶಿಕ್ಷಣಾಧಿಕಾರಿಗಳು, 9 ಜಿಲ್ಲೆಗಳ ಡಿಡಿಪಿಐ ಹಾಗೂ ಡಯಟ್ ಪ್ರಾಚಾರ್ಯರು, ಅಕ್ಷರ ದಾಸೋಹ ಯೋಜನೆಯ ಅಧಿಕಾರಿಗಳು ಸೇರಿದಂತೆ ವಿವಿಧ ಹಂತಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, ವರದಿಗಳನ್ನು ಮಂಡಿಸಿದರು.

