ಹೈದರಾಬಾದ್: ಕಳೆದ ಡಿಸೆಂಬರ್ 2024 ರಂದು ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ‘ಪುಷ್ಪ-2’ ಚಿತ್ರದ ಪ್ರಥಮ ಪ್ರದರ್ಶನದ ಸಂದರ್ಭದಲ್ಲಿ ನಟ ಅಲ್ಲು ಅರ್ಜುನ್ ನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದು ನೂಕುನುಗ್ಗಲು ಸಂಭವಿಸಿ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ಸಾವನ್ನಪ್ಪಿ, ಅವರ ಎಂಟು ವರ್ಷದ ಮಗ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರ ತನಿಖೆ ಪೂರ್ಣಗೊಂಡಿದ್ದು ತೆಲುಗು ನಟ ಅಲ್ಲು ಅರ್ಜುನ್ ಸೇರಿದಂತೆ 23 ಜನರ ವಿರುದ್ಧ ನಗರ ಪೊಲೀಸರು ಡಿ.24ರಂದು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಚಾರ್ಜ್ಶೀಟ್ನಲ್ಲಿ ಥಿಯೇಟರ್ನ ಮಾಲೀಕರು, ಪಾಲುದಾರರು,ವ್ಯವಸ್ಥಾಪಕರು ಮತ್ತು ಕೆಳ ಬಾಲ್ಕನಿ ಇನ್ಚಾರ್ಜ್ ಮತ್ತು ಗೇಟ್ಕೀಪರ್ ಅವರನ್ನು ಆರೋಪಿ ಸಂಖ್ಯೆ 1 ರಿಂದ 10 ರವರೆಗೆ ಹೆಸರಿಸಲಾಗಿದ್ದು, ಅರ್ಜುನ್ ಅವರನ್ನು ಆರೋಪಿ ಸಂಖ್ಯೆ 11 ಎಂದು ಹೆಸರಿಸಲಾಗಿದೆ.
ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದ ತನಿಖೆ ಪೂರ್ಣಗೊಂಡಿದೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಶನಿವಾರ ಹೇಳಿದ್ದಾರೆ.

ಘಟನೆಯ ನಂತರ, ಮೃತ ಮಹಿಳೆಯ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ನಗರ ಪೊಲೀಸರು ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ನಿರ್ವಹಣೆಯ ವಿರುದ್ಧ ಚಿಕ್ಕದಪಲ್ಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ನ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಪೊಲೀಸರ ಪ್ರಕಾರ, ಒಟ್ಟು 23 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಅವರಲ್ಲಿ 14 ಮಂದಿಯನ್ನು ಬಂಧಿಸಲಾಗಿದೆ, ಉಳಿದ ಒಂಬತ್ತು ಮಂದಿಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ.

ಅಲ್ಲು ಅರ್ಜುನ್ ಅವರನ್ನು ಡಿಸೆಂಬರ್ 13, 2024 ರಂದು ಬಂಧಿಸಲಾಯಿತು ಮತ್ತು ತೆಲಂಗಾಣ ಹೈಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿದ ನಂತರ ಡಿಸೆಂಬರ್ 14, 2024 ರಂದು ಜೈಲಿನಿಂದ ಬಿಡುಗಡೆ ಮಾಡಲಾಯಿತು.

