ನವದೆಹಲಿ : ಭಾರತದ ಸಾಂಸ್ಕೃತಿಕ ಬೇರುಗಳನ್ನು ಮುಂದಕ್ಕೆ ಕೊಂಡೊಯ್ಯುವುದರ ಜೊತೆಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಡಿಜಿಟಲ್ ನಾವೀನ್ಯತೆಯಲ್ಲಿ ಅಭಿವೃದ್ಧಿಯನ್ನು ಮುನ್ನಡೆಸುತ್ತಿರುವ ದೇಶದ ಯುವಕರಿಂದಾಗಿ ಜಗತ್ತು ಭಾರತವನ್ನು ಹೆಚ್ಚಿನ ನಿರೀಕ್ಷೆಗಳೊಂದಿಗೆ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 129 ನೇ ಸಂಚಿಕೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು “ಇಂದು ಜಗತ್ತು ಭಾರತವನ್ನು ಹೆಚ್ಚಿನ ನಿರೀಕ್ಷೆಗಳೊಂದಿಗೆ ನೋಡುತ್ತಿದೆ. ಈ ಭರವಸೆಗೆ ದೊಡ್ಡ ಕಾರಣ ನಮ್ಮ ಯುವಕರು. ವಿಜ್ಞಾನ ಕ್ಷೇತ್ರದಲ್ಲಿ, ನಮ್ಮ ಸಾಧನೆಗಳು, ನಾವೀನ್ಯತೆಗಳು ಮತ್ತು ತಾಂತ್ರಿಕ ಪ್ರಗತಿಗಳು ಪ್ರಪಂಚದಾದ್ಯಂತದ ದೇಶಗಳನ್ನು ಪ್ರಭಾವಿತಗೊಳಿಸಿವೆ” ಎಂದು ಹೇಳಿದರು.ಭಾರತದ ಯುವಕರು ಯಾವಾಗಲೂ ಹೊಸದನ್ನು ಮಾಡುವ ಉತ್ಸಾಹವನ್ನು ಹೊಂದಿದ್ದಾರೆ ಮತ್ತು ಅಷ್ಟೇ ಜಾಗೃತರು ಮತ್ತು ಸಾಮಾಜಿಕ ಪ್ರಜ್ಞೆಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.
ಮಾತನ್ನು ಮುಂದುವರಿಸುತ್ತಾ ಫಿಜಿಯಲ್ಲಿ ತಮಿಳು ದಿನ ಆಚರಣೆ ಮತ್ತು ಯುಎಇಯ ದುಬೈನಲ್ಲಿ ಕನ್ನಡ ಪಾಠಶಾಲೆಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಪ್ರಾದೇಶಿಕ ಭಾಷೆಗಳಲ್ಲಿ ಗಡಿಗಳನ್ನು ಮೀರಿದ ಹೆಮ್ಮೆ ಇದೆ ಎಂದು ಹೇಳಿದರು.
ದುಬೈನ ಕನ್ನಡ ಶಾಲೆಯ ಬಗ್ಗೆ ಉಲ್ಲೇಖಿಸಿದ ಅವರು : ಸಂಸ್ಕೃತಿಯಲ್ಲಿ ಬೇರೂರಿರುವ ಈ ಪ್ರಯತ್ನ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ವಿದೇಶಗಳಲ್ಲಿ ವಾಸಿಸುವ ಭಾರತೀಯರು ಸಹ ತಮ್ಮ ಪರಂಪರೆಯನ್ನು ಸಂರಕ್ಷಿಸುವಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ.ದುಬೈನಲ್ಲಿ ವಾಸಿಸುವ ಕನ್ನಡ ಕುಟುಂಬಗಳ ಉದಾಹರಣೆಯನ್ನು ನೀಡುತ್ತಾ ಅವರು, “ಅಲ್ಲಿ ವಾಸಿಸುವ ಕುಟುಂಬಗಳು ತಮ್ಮನ್ನು ತಾವು ಒಂದು ಪ್ರಮುಖ ಪ್ರಶ್ನೆಯನ್ನು ಕೇಳಿಕೊಂಡವು; ನಮ್ಮ ಮಕ್ಕಳು ತಂತ್ರಜ್ಞಾನ ಜಗತ್ತಿನಲ್ಲಿ ಮುಂದುವರಿಯುತ್ತಿದ್ದಾರೆ, ಆದರೆ ಅವರು ತಮ್ಮ ಭಾಷೆಯಿಂದ ದೂರ ಸರಿಯುತ್ತಿಲ್ಲವೇ? ಆದರೆ ಅವರು ತಮ್ಮ ನೆಲದ ಭಾಷೆಯಾದ ಕನ್ನಡದಿಂದ ದೂರ ಆಗುತ್ತಿದ್ದಾರೆ ಎಂಬ ಉದ್ದೇಶದಿಂದ ದುಬೈನಲ್ಲಿ ಕನ್ನಡ ಪಾಠ ಶಾಲೆ ಆರಂಭವಾಯ್ತು ಎಂದಿದ್ದಾರೆ. ಆ ಮೂಲಕ ದುಬೈ ಕನ್ನಡಿಗರ ಕನ್ನಡ ಭಾಷಾ ಪ್ರೇಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಾ, ದುಬೈನಲ್ಲಿ ‘ಕನ್ನಡ ಪಾಠಶಾಲೆ’ ಹುಟ್ಟಿದ್ದು ಇದೇ ಕಾರಣಕ್ಕಾಗಿ ಇಲ್ಲೇ. ಮಕ್ಕಳಿಗೆ ಕನ್ನಡ ಓದಲು, ಬರೆಯಲು, ಕಲಿಯಲು ಮತ್ತು ಮಾತನಾಡಲು ಕಲಿಸುವ ಒಂದು ಉಪಕ್ರಮ. ಇಂದು ಸಾವಿರಕ್ಕೂ ಹೆಚ್ಚು ಮಕ್ಕಳು ಇದರೊಂದಿಗೆ ಸಂಬಂಧ ಹೊಂದಿದ್ದಾರೆ.”ಆ ಮೂಲಕ ದುಬೈ ಕನ್ನಡಿಗರ ಕನ್ನಡ ಭಾಷಾ ಪ್ರೇಮದ ಬಗ್ಗೆ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಹೊರಗಿನ ಅತಿದೊಡ್ಡ ಕನ್ನಡ ಭಾಷಾಶಾಲೆ ಆಗಿರುವ ‘ಕನ್ನಡ ಪಾಠ ಶಾಲೆ’ ದುಬೈನಲ್ಲಿ 2014 ರಿಂದ ಪ್ರಾರಂಭವಾಯಿತು.ದುಬೈನಲ್ಲಿರುವ ಕನ್ನಡಿಗ ಮಕ್ಕಳಲ್ಲಿ ಕನ್ನಡ ನೆಲದ ಭಾಷೆ ಮತ್ತು ಸಂಸ್ಕೃತಿ, ಆಚಾರ, ವಿಚಾರಯನ್ನು ತಿಳಿಸುವ ಸದುದ್ದೇಶದಿಂದ ಈ ಶಾಲೆ ಕನ್ನಡಿಗರಿಂದಲೇ ಆರಂಭವಾಗಿದ್ದು,‘ಕನ್ನಡ ಮಿತ್ರರು’ ಎಂಬ ಸಂಘಟನೆ ಈ ಶಾಲೆಯನ್ನು ನಡೆಸಿಕೊಂಡು ಬಂದಿದೆ.

