ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಹಾಲಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣಗೆ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಇಂದು ಬಿಗ್ ರಿಲೀಫ್ ನೀಡಿದೆ. ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಐಪಿಸಿ ಸೆಕ್ಷನ್ 354ಎ ಅಡಿಯ ಆರೋಪದ ಕೇಸ್ ಪರಿಗಣನೆಗೆ ಕೋರ್ಟ್ ನಿರಾಕರಿಸಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ರೇವಣ್ಣ ಇದೀಗ ಕೋರ್ಟ್ ಆದೇಶದಿಂದ ನಿರಾಳರಾಗಿದ್ದಾರೆ.
ಮಹಿಳೆ ವಿಳಂಬವಾಗಿ ಕೇಸ್ ದಾಖಲಿಸಿದ ಕಾರಣಕ್ಕೆ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಐಪಿಸಿ ಸೆಕ್ಷನ್ 354ಎ ಅಡಿಯ ಆರೋಪದ ಕೇಸ್ ಪರಿಗಣನೆಗೆ ಬೆಂಗಳೂರಿನ 42ನೇ ಎಸಿಜೆಎಂ ಜಡ್ಜ್ ಕೆ.ಎನ್.ಶಿವಕುಮಾರ್ ನಿರಾಕರಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಹೆಚ್.ಡಿ.ರೇವಣ್ಣ ವಿರುದ್ಧದ ಎರಡು ಸೆಕ್ಷನ್ಗಳಲ್ಲಿ ಹೈಕೋರ್ಟ್, ಸೆಕ್ಷನ್ 354 ರದ್ದುಪಡಿಸಿತ್ತು. ಇದೀಗ ಮತ್ತೊಂದು ಸೆಕ್ಷನ್ ಕೋರ್ಟ್ ಕೈಬಿಟ್ಟಿದ್ದು, ರೇವಣ್ಣಗೆ ರಿಲೀಫ್ ಸಿಕ್ಕಂತಾಗಿದೆ.

ಮನೆ ಕೆಲಸಕ್ಕಿದ್ದ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಶಾಸಕ ಎಚ್.ಡಿ ರೇವಣ್ಣ ಹಾಗೂ ಅವರ ಮಗ ಪ್ರಜ್ವಲ್ ರೇವಣ್ಣ ವಿರುದ್ಧ 2024ರ ಎ.28 ರಂದು ಮಹಿಳೆಯ ದೂರು ಆಧರಿಸಿ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಈ ಪ್ರಕರಣದಲ್ಲಿ ರೇವಣ್ಣ ಮೊದಲನೇ ಆರೋಪಿ, ಪ್ರಜ್ವಲ್ ರೇವಣ್ಣ ಎರಡನೇ ಆರೋಪಿಯಾಗಿ ಹೆಸರಿಸಲಾಗಿತ್ತು.

