ನವದೆಹಲಿ : ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಭಾರತೀಯ ನಾಗರಿಕರನ್ನು ಗಡೀಪಾರು ಮಾಡಿದ ದೇಶ ಯಾವುದು ಅಂದರೆ ಅದು ಸೌದಿ ಅರೇಬಿಯಾ, ಭಾರತ ಸರ್ಕಾರ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಸೌದಿ ಅರೇಬಿಯಾ 2021 ಮತ್ತು 2025 ರ ನಡುವೆ ವಿಶ್ವದಲ್ಲೇ ಅತಿ ಹೆಚ್ಚು ಭಾರತೀಯ ನಾಗರಿಕರನ್ನು ಗಡೀಪಾರು ಮಾಡಿದೆ. ಆದರೆ ಅಮೆರಿಕದಿಂದ ಗಡೀಪಾರು ಮಾಡುವ ಅಂಕಿಅಂಶಗಳು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ (MEA) ರಾಜ್ಯಸಭೆಯಲ್ಲಿ ಮಂಡಿಸಿದ ಅಧಿಕೃತ ಅಂಕಿಅಂಶಗಳು ತಿಳಿಸಿವೆ.

ಸರ್ಕಾರ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಸೌದಿ ಅರೇಬಿಯಾ 2021 ಮತ್ತು 2025 ರ ನಡುವೆ ವಿಶ್ವದಲ್ಲೇ ಅತಿ ಹೆಚ್ಚು ಭಾರತೀಯ ಪ್ರಜೆಗಳನ್ನು ಗಡೀಪಾರು ಮಾಡಿದೆ. ರಿಯಾದ್ನಲ್ಲಿರುವ ಭಾರತೀಯ ಮಿಷನ್ನ ಮಾಹಿತಿಯ ಪ್ರಕಾರ, 2021 ರಲ್ಲಿ 8,887 ಜನರನ್ನು, 2022 ರಲ್ಲಿ 10,277 ಜನರನ್ನು, 2023 ರಲ್ಲಿ 11,486 ಜನರನ್ನು, 2024 ರಲ್ಲಿ 9,206 ಜನರನ್ನು ಮತ್ತು 2025 ರಲ್ಲಿ 7,019 ಜನರನ್ನು ಗಡೀಪಾರು ಮಾಡಲಾಗಿದೆ.
ಅಮೆರಿಕದಿಂದ ಭಾರತೀಯ ನಾಗರಿಕರ ಗಡೀಪಾರು ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ. ಅಮೆರಿಕದ ಭಾರತೀಯ ಮಿಷನ್ಗಳಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪಡೆದ ಮಾಹಿತಿಯ ಪ್ರಕಾರ, ವಾಷಿಂಗ್ಟನ್ ಡಿಸಿಯಿಂದ 2021 ರಲ್ಲಿ 805 ಮಂದಿ, 2022 ರಲ್ಲಿ 862, 2023 ರಲ್ಲಿ 617ಮಂದಿ, 2024 ರಲ್ಲಿ 1,368 ಮಂದಿ ಮತ್ತು 2025 ರಲ್ಲಿ 3,414 ಜನರನ್ನು ಗಡೀಪಾರು ಮಾಡಲಾಗಿದೆ.ಇತರ ಯುಎಸ್ ಮಿಷನ್ಗಳಿಂದ (ಸ್ಯಾನ್ ಫ್ರಾನ್ಸಿಸ್ಕೊ, ನ್ಯೂಯಾರ್ಕ್, ಅಟ್ಲಾಂಟಾ, ಹೂಸ್ಟನ್, ಚಿಕಾಗೋ) ಗಡೀಪಾರು ಹೆಚ್ಚಾಗಿ ಎರಡು ಅಂಕೆಗಳಿಗೆ ಅಥವಾ ಕೆಲವು ನೂರಕ್ಕೆ ಸೀಮಿತವಾಗಿದೆ, ಇದು ಗಲ್ಫ್ ರಾಷ್ಟ್ರಗಳ ಅಂಕಿಅಂಶಗಳಿಗಿಂತ ತೀರಾ ಕಡಿಮೆ.

ವಿದೇಶಾಂಗ ಸಚಿವಾಲಯದ ಪ್ರಕಾರ, ಭಾರತೀಯ ಪ್ರಜೆಗಳನ್ನು ಗಡೀಪಾರು ಮಾಡಲು ಪ್ರಮುಖ ಕಾರಣಗಳೆಂದರೆ ವೀಸಾ ಅವಧಿ ಮುಗಿದ ನಂತರವೂ ದೇಶದಲ್ಲಿಯೇ ಇರುವುದು, ಮಾನ್ಯ ಕೆಲಸದ ಪರವಾನಗಿ ಇಲ್ಲದೆ ಕೆಲಸ ಮಾಡುವುದು, ಉದ್ಯೋಗದಾತರಿಂದ ತಪ್ಪಿಸಿಕೊಳ್ಳುವುದು, ಸ್ಥಳೀಯ ಕಾರ್ಮಿಕ ಕಾನೂನುಗಳ ಉಲ್ಲಂಘನೆ ಮತ್ತು ಕಾಲಕಾಲಕ್ಕೆ ನಡೆಸಲಾಗುವ ದೊಡ್ಡ ಪ್ರಮಾಣದ ಜಾರಿ ಕಾರ್ಯಾಚರಣೆಗಳು.

