ಕಾಸರಗೋಡು : ಬೇಕಲ್ ಬೀಚ್ ಫೆಸ್ಟ್ನಲ್ಲಿ ನಡೆದ ಗದ್ದಲದ ನಂತರ ಸ್ಥಗಿತಗೊಂಡಿದ್ದ ರ್ಯಾಪರ್ ವೇಡನ್ ನ ಸಂಗೀತ ಕಾರ್ಯಕ್ರಮ ನೋಡಿ ಹಿಂತಿರುಗುತ್ತಿದ್ದಾಗ 19 ವರ್ಷದ ಯುವಕನಿಗೆ ರೈಲು ಡಿಕ್ಕಿ ಹೊಡೆದಿದೆ. ಮೃತನನ್ನು ಪೊಯಿನಾಚಿಯ ಶಿವಾನಂದನ್ ಎಂದು ಗುರುತಿಸಲಾಗಿದೆ. ಇದೇ ಘಟನೆಯಲ್ಲಿ ಮತ್ತೊಬ್ಬ ಯುವಕ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ .

ಕಾಸರಗೋಡಿನ ಬೇಕಲ್ ಬೀಚ್ ಫೆಸ್ಟ್ನ ಅಂಗವಾಗಿ ರ್ಯಾಪರ್ ವೇಡನ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು . ತಮ್ಮ ನೆಚ್ಚಿನ ಗಾಯಕನನ್ನು ನೋಡಲು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು.ಆದರೆ ನಿಗದಿಗಿಂತ ಹೆಚ್ಚಿನ ಪ್ರೇಕ್ಷಕರು ಸ್ಟೇಜ್ ಬಳಿ ಜಮಾಯಿಸಿದ್ದರಿಂದ ಜನದಟ್ಟಣೆ ಹೆಚ್ಚಾಗಿ ನೂಕುನುಗ್ಗಲು ಉಂಟಾಗಿದೆ.ಇದರಿಂದ ಹಲವರಿಗೆ ಗಾಯಗೊಂಡು ಆಸ್ಪತ್ರೆಗೆ ತುರ್ತಾಗಿ ಸೇರಿಸಲಾಗಿದೆ .ಈ ಎಲ್ಲಾ ಬೆಳವಣಿಗೆಯಿಂದ ಕಾರ್ಯಕ್ರಮ ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ಕಾರ್ಯಕ್ರಮ ಸ್ಥಗಿತಗೊಂಡ ನಂತರ ದೊಡ್ಡ ಜನಸಮೂಹ ಚದುರಿಹೋದಾಗ, ಅನೇಕ ಜನರು ಹತ್ತಿರದ ರೈಲು ಹಳಿಯಲ್ಲಿ ನಡೆದುಕೊಂಡು ಹೋದರು.ಆ ಸಮಯದಲ್ಲಿ ಇಬ್ಬರು ಯುವಕರಿಗೆ ರೈಲು ಡಿಕ್ಕಿ ಹೊಡೆದು ಒಬ್ಬ ಸಾವನ್ನಪ್ಪಿದ್ದಾನೆ. ಮತ್ತೊಬ್ಬನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಕ್ರಮದ ಆಯೋಜಕರ ವಿರುದ್ಧ ಜನರು ಅಸಮಾಧಾನವನ್ನು ಹೊರಹಾಕಿದ್ದಾರೆ .

