ಢಾಕಾ : ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯ ಗಾರ್ಮೆಂಟ್ ಕಾರ್ಖಾನೆಯೊಳಗೆ ಹಿಂದೂ ಉದ್ಯೋಗಿಯೊಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಕಳೆದ ಎರಡು ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಮೂರನೇ ಹತ್ಯೆ ಇದಾಗಿದೆ.

ಸೋಮವಾರ ಸಂಜೆ 6:45 ರ ಸುಮಾರಿಗೆ ಭಾಲುಕಾ ಉಪಜಿಲ್ಲಾದ ಸುಲ್ತಾನ ಸ್ವೆಟರ್ಸ್ ಲಿಮಿಟೆಡ್ನಲ್ಲಿ ಈ ಘಟನೆ ನಡೆದಿದೆ. ಮೃತನನ್ನು 42 ವರ್ಷದ ಬಜೇಂದ್ರ ಬಿಸ್ವಾಸ್ ಎಂದು ಗುರುತಿಸಲಾಗಿದ್ದು, ಅವರು ಗಾರ್ಮೆಂಟ್ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಆರೋಪಿ 29 ವರ್ಷದ ನೋಮನ್ ಮಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಬ್ಬರೂ ಕಾರ್ಖಾನೆಯಲ್ಲಿ ಭದ್ರತಾ ಕರ್ತವ್ಯದಲ್ಲಿದ್ದರು.ಇಬ್ಬರ ನಡುವೆ ಸಂಭಾಷಣೆಯ ಸಮಯದಲ್ಲಿ, ನೋಮನ್ ಮಿಯಾ ಸೆಕ್ಯೂರಿಟಿ ಕೆಲಸಕ್ಕೆ ಸರ್ಕಾರ ನೀಡಿದ ಶಾಟ್ ಗನ್ ನಿಂದ ಬಜೇಂದ್ರನತ್ತ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಕರ್ತವ್ಯದಲ್ಲಿರುವಾಗಲೇ ಈ ಘಟನೆ ನಡೆದಿದೆ.

ಗಂಭೀರ ಸ್ಥಿತಿಯಲ್ಲಿದ್ದ ಬಜೇಂದ್ರ ಅವರನ್ನು ಭಾಲುಕಾ ಉಪಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಬಾಂಗ್ಲಾದೇಶದಲ್ಲಿ ಕಳೆದ 12 ದಿನಗಳಲ್ಲಿ ಮೂರನೇ ಬಾರಿಗೆ ಹಿಂದೂ ವ್ಯಕ್ತಿಯೊಬ್ಬನ ಹತ್ಯೆಯಾಗಿದೆ. ಇದಕ್ಕೂ ಮೊದಲು, ಡಿಸೆಂಬರ್ 24 ರಂದು ರಾತ್ರಿ 11:00 ಗಂಟೆ ಸುಮಾರಿಗೆ, ರಾಜ್ಬರಿ ಜಿಲ್ಲೆಯ ಹೊಸೆಂಡಂಗಾ ಗ್ರಾಮದಲ್ಲಿ ಹಿಂದೂ ಯುವಕನೊಬ್ಬನನ್ನು ಥಳಿಸಿ ಕೊಲ್ಲಲಾಗಿತ್ತು. ಬಲಿಯಾದ ವ್ಯಕ್ತಿಯನ್ನು 29 ವರ್ಷದ ಅಮೃತ್ ಮಂಡಲ್ ಯಾನೆ ಸಾಮ್ರಾಟ್ ಎಂದು ಗುರುತಿಸಲಾಗಿದೆ, ಇದಕ್ಕೂ ಮುನ್ನ, ಡಿಸೆಂಬರ್ 18 ರಂದು ಢಾಕಾ ಬಳಿ, ಮತ್ತೊಬ್ಬ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರನ್ನು ಗುಂಪೊಂದು ಕೊಂದು, ನಂತರ ಮರಕ್ಕೆ ನೇತುಹಾಕಿ ಬೆಂಕಿ ಹಚ್ಚಿತು.

