ಮಂಗಳೂರು : ಬಾಲ ಯೇಸುವಿನ ಪುಣ್ಯಕ್ಷೇತ್ರ ಬಿಕರ್ನಕಟ್ಟೆ, ಮಂಗಳೂರು ಇಲ್ಲಿಯ ವಾರ್ಷಿಕ ಮಹೋತ್ಸವವನ್ನು ಜನವರಿ 14 ಹಾಗೂ 15 ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಬಾಲಯೇಸು ಪುಣ್ಯಕ್ಷೇತ್ರದ ನಿರ್ದೇಶಕರಾದ ವಂದನೀಯ ಫಾ|ಸ್ಟೀಫನ್ ಪಿರೇರಾ ಅವರು ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

.
ಜನವರಿ 14ರಂದು ಸಂಜೆ 6.00 ಘಂಟೆಗೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಅತೀ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ, ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ನಡೆಸಿಕೊಡಲಿರುವರು. ಅದೇ ದಿನ ಬೆಳಿಗ್ಗೆ 10.00 ಘಂಟೆಗೆ ವೃದ್ಧರು ಹಾಗೂ ಅಸ್ವಸ್ಥರಿಗಾಗಿ ಅತೀ ವಂದನೀಯ ಡಾ| ಅಲೋಶಿಯಸ್ ಪಾವ್ಲ್ ಡಿಸೋಜಾ, ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರು ವಿಶೇಷ ಬಲಿಪೂಜೆಯನ್ನು ನೆರವೇರಿಸುವರು.
ಜನವರಿ 15ರಂದು ಬೆಳಿಗ್ಗೆ 10.00 ಘಂಟೆಗೆ ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ದುಮಿಂಗ್ ಡಾಯಸ್ ನಡೆಸಿಕೊಡಲಿರುವರು. ಇದು ಮಕ್ಕಳಿಗಾಗಿ ಅರ್ಪಿಸಲಾಗುವ ವಿಶೇಷ ಪೂಜಾವಿಧಿಯಾಗಿದೆ. ಮಹೋತ್ಸವದ ಸಮಾರೋಪ ಪ್ರಾರ್ಥನಾವಿಧಿ ಸಂಜೆ 6.00 ಘಂಟೆಗೆ ಅತಿ ವಂದನೀಯ ಮೊನ್ಸಿಂಞೆರ್ ಮ್ಯಾಕ್ಸಿಂ ನೊರೊನ್ಹಾ, ಪ್ರಧಾನ ಗುರುಗಳು, ಮಂಗಳೂರು ಧರ್ಮಪ್ರಾಂತ್ಯ, ಇವರು ನೆರವೇರಿಸುವರು ಎಂದರು.

ಜನವರಿ 14ರಂದು ಬೆಳಿಗ್ಗೆ 6.00 (ಕೊಂಕಣಿ), 8.00 (ಇಂಗ್ಲೀಷ್), 1.00 (ಕನ್ನಡ) ,ಜನವರಿ 15 ರಂದು ಬೆಳಿಗ್ಗೆ 6.00, 8.00 ಘಂಟೆಗೆ ಕೊಂಕಣಿಯಲ್ಲಿ, 10.00 ಘಂಟೆಗೆ ಮಕ್ಕಳಿಗಾಗಿ ವಿಶೇಷ ಪೂಜೆ ಹಾಗೂ 1.00 ಘಂಟೆಗೆ ಮಲಯಾಳಂ ಭಾಷೆಯಲ್ಲಿ ಪೂಜೆ ನೆರವೇರುವುದು.
ನವದಿನಗಳ ನವೇನಾ ಪ್ರಾರ್ಥನೆ: ಈ ಎರಡು ದಿನದ ವಾರ್ಷಿಕ ಮಹೋತ್ಸವಕ್ಕಾಗಿ ನವದಿನಗಳ ಸಿದ್ಧತೆ – ನವೇನಾ ಪ್ರಾರ್ಥನೆ ಜನವರಿ 5 ರಿಂದ ಜನವರಿ 13 ರ ವರೆಗೆ ನಡೆಯಲಿರುವುದು.ಆ ದಿನಗಳಲ್ಲಿ ಪ್ರತಿದಿನ 9 ಪ್ರಾರ್ಥನಾ ವಿಧಿಗಳು ನಡೆಯುವವು. ಬೆಳಿಗ್ಗೆ 6.00, 7.30, 9.00, 10.30 ಹಾಗೂ ಮಧ್ಯಾಹ್ನ 1.00 ಘಂಟೆಗೆ ಕೊಂಕಣಿ ಭಾಷೆಯಲಿ,್ಲ ಸಂಜೆ 4.00 ಘಂಟೆಗೆ ಮಲಯಾಳಂ, 5.00 ಘಂಟೆಗೆ ಇಂಗ್ಲೀಷ್ ಹಾಗೂ 7.45 ಘಂಟೆಗೆ ಕನ್ನಡದಲ್ಲಿ ಬಲಿಪೂಜೆಯು ನಡೆಯಲಿರುವುದು.
ಧರ್ಮಾಧ್ಯಕ್ಷರ ಪೂಜಾವಿಧಿಗಳು: ಜನವರಿ 5 ಸೋಮವಾರದಂದು ಬೆಳಿಗ್ಗೆ 10:30ರ ಪ್ರಾರ್ಥನಾ ವಿಧಿಯನ್ನು ಬರೇಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಇಗ್ನೇಶಿಯಸ್ ಡಿಸೋಜಾರವರು ನೆರವೇರಿಸಲಿರುವರು. ಆ ದಿನದಂದು ಅನಿವಾಸಿ ಭಾರತೀಯರಿಗಾಗಿ ಪ್ರಾರ್ಥಿಸಲಾಗುವುದು.

ಜನವರಿ 10, ಶನಿವಾರದಂದು ಬೆಳಿಗ್ಗೆ 10:30ರ ಬಲಿಪೂಜೆಯನ್ನು ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಹೆನ್ರಿ ಡಿಸೋಜಾ, ಇವರು ನೆರವೇರಿಸಲಿರುವರು.ಈ ದಿನದಂದು ಎಲ್ಲಾ ಮಕ್ಕಳಿಗಾಗಿ ಪ್ರಾರ್ಥಿಸಲಾಗುವುದು ಎಂದರು.
ಪರಮ ಪ್ರಸಾದದ ಆರಾಧನೆ: ಪ್ರತಿ ನವೆನಾ ದಿನಗಳಲ್ಲಿ 11.45 ರಿಂದ 12.30 ಘಂಟೆಯ ವರೆಗೆ ನಡೆಯುವುದು. ಈ ವೇಳೆ ವಿವಿಧ ಅಗತ್ಯಗಳಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು. ದಿವ್ಯಬಾಲ ಯೇಸುವಿನ ಮೆರವಣಿಗೆಯನ್ನು ಪ್ರತಿದಿನ ಸಂಜೆಯ 6.00 ಘಂಟೆಯ ಬಲಿಪೂಜೆಯ ಬಳಿಕ ಸುಮಾರು 7:15 ಕ್ಕೆ ಹಮ್ಮಿಕೊಳ್ಳಲಾಗಿದೆ.
ಹೊರೆಕಾಣಿಕೆ : ಮಹೋತ್ಸವದ ಹೊರೆಕಾಣಿಕೆಯು ಜನವರಿ 3 ರಂದು ಸಂಜೆ 4.30 ಘಂಟೆಗೆ ಹೋಲಿಕ್ರಾಸ್ ಚರ್ಚ್, ಕುಲಶೇಕರದಿಂದ ಆರಂಭಗೊಳ್ಳುವುದು. ಹೊರೆಕಾಣಿಕೆಯ ಅಂತಿಮಭಾಗದಲ್ಲಿ ಸಹಬಾಳ್ವೆ ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆನಂತರ ವಂ| ಡಾ| ಪ್ರವೀಣ್ ಮಾರ್ಟಿಸ್, ಸಂತ ಅಲೋಶಿಯಸ್ ವಿಶ್ವ ವಿದ್ಯಾಲಯದ ಉಪಕುಲಪತಿಯವರು ಧ್ವಜಾರೋಹಣವನ್ನು ಮಾಡುವರು.
ಅನ್ನಸಂತರ್ಪಣೆ: ನವೇನಾ ಹಾಗೂ ಹಬ್ಬದ ದಿನಗಳಲ್ಲಿ (ಜನವರಿ 5 ರಿಂದ 15 ರ ವರೆಗೆ) ಮಧ್ಯಾಹ್ನದ ವೇಳೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯು ನಡೆಯಲಿರುವುದು.
ಕಣ್ಣಿನ ಶಿಬಿರ: ಜನವರಿ 7 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ಘಂಟೆಯ ವರೆಗೆ ಕಣ್ಣಿನ ಶಿಬಿರವನ್ನು ಏರ್ಪಡಿಸಲಾಗಿದೆ.
ರಕ್ತದಾನ ಶಿಬಿರ : ಜನವರಿ 9 ಹಾಗೂ 10 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ಘಂಟೆಯ ವರೆಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.

ಸಮಾಜಾಭಿವೃದ್ಧಿ ಯೋಜನೆಯ ಅನಾವರಣ: ಕಾರ್ಮೆಲ್ ಸಭೆಯ ಸುಧಾರಕಾರಾದ ಶಿಲುಬೆಯ ಸಂತವಯೊವಾನ್ನರನ್ನು ಸಂತ ಪದವಿಗೇರಿಸಿ 300 ಸಂವತ್ಸರಗಳು ಹಾಗೂ ಧರ್ಮಸಭೆಯ ಪಂಡಿತ ಎಂದು ನಾಮಕರಣಗೊಳಿಸಿ ಶತಾಬ್ದಿಯನ್ನು ಪೂರೈಸುವ ಜುಬಿಲಿ ವರ್ಷದಲ್ಲಿ ಕಾರ್ಮೆಲ್ ಇಗ್ನೆಟ್ ಎನ್ನುವ ಕಾರ್ಯಕ್ರಮದಡಿ ಬಡ ಹಾಗೂ ಯೋಗ್ಯ 400 ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಸ್ತು ಪ್ರದರ್ಶನ: ನವೇನಾ ಹಾಗೂ ಹಬ್ಬದ ದಿನಗಳಲ್ಲಿ ಶಿಲುಬೆಯ ಸಂತ ಯೊವಾನ್ನರ ಜೀವನ ಹಾಗೂ ಬೋದನೆಗಳನ್ನು ಆದರಿಸಿ ಒಂದು ವಿಶೇಸ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿಕಾಗೋಷ್ಠಿಯಲ್ಲಿ ವಂದನೀಯ ಫಾ| ಮೆಲ್ವಿನ್ ಡಿಕುನ್ಹಾ, ಗುರುಮಠದ ಮುಖ್ಯಸ್ಥರು, ಬಾಲಯೇಸುವಿನ ಪುಣ್ಯಕ್ಷೇತ್ರ, ವಂದನೀಯ ಫಾ| ದೀಪ್ ಫೆರ್ನಾಂಡಿಸ್, ಕಾರ್ಮೆಲ್ ಸಭೆ, ಶ್ರೀ ವಲೇರಿಯನ್ ಫುರ್ಟಾಡೊ, ಬಾಳೊಕ್ ಜೆಜು ಕುಟಮ್, ಶ್ರೀ ವಿಲ್ಫ್ರೆಡ್ ಲಸ್ರಾದೊ, ವ್ಯವಸ್ಥಾಪಕರು, ಬಾಲಯೇಸುವಿನ ಪುಣ್ಯಕ್ಷೇತ್ರ ಮುಂತಾದವರು ಉಪಸ್ಥಿತರಿದ್ದರು.


