ಮಂಗಳೂರು : ಮಂಗಳೂರಿನ ಒಮೇಗಾ ಆಸ್ಪತ್ರೆಯಲ್ಲಿ 35 ವರ್ಷ ಹಿಂದೆ ಅಳವಡಿಸಿದ ಪೇಸ್ಮೇಕರ್ ತಂತಿಯನ್ನು ಶಸ್ತ್ರಚಿಕಿತ್ಸೆ ರಹಿತ ಹೊರತೆಗೆಯುವ ಮಹತ್ತರ ಕಾರ್ಯ ಯಶಸ್ವಿಯಾಗಿ ನಡೆದಿದೆ ಎಂದು ಒಮೇಗಾ ಆಸ್ಪತ್ರೆಯ ನಿರ್ದೇಶಕರು ಹಾಗೂ ಹಿರಿಯ ಹ್ರದ್ರೋಗ ತಜ್ಞರಾದ ಡಾ|ಮುಕುಂದ್ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

35 ವರ್ಷ ಹಳೆಯ ಪೇಸ್ ಮೇಕರ್ ತಂತಿಯ ಹೊರ ತೆಗೆಯುವ ನಿರ್ವಹಣೆ ಯಾವುದೇ ತೊಡಕುಗಳಿಲ್ಲದೆ ನಡೆಸಲಾಯಿತು. ಇದು ಅತ್ಯಂತ ಸಂಕೀರ್ಣ ಮತ್ತು ಅಪರೂಪದ ಚಿಕಿತ್ಸೆಯಾಗಿದ್ದು ಈ ಅಸಾಧಾರಣ ವೈದ್ಯಕೀಯ ಪರಿಣತಿಯ ಕೆಲಸವನ್ನು ಮಂಗಳೂರಿನ ಒಮೇಗಾ ಹೃದ್ರೋಗ ಆಸ್ಪತ್ರೆಯಲ್ಲಿ ಪ್ರಪ್ರಥಮವಾಗಿ ನಡೆಸಲಾಯಿತು ಎಂದರು.
ಸುಮಾರು ಒಂದು ವರ್ಷದಿಂದ ನಿರಂತರ ಜ್ವರದಿಂದ ಬಳಲುತ್ತಿದ್ದ 68 ವರ್ಷ ವಯಸ್ಸಿನ ಕಲ್ಲಿಕೋಟೆಯ ಶ್ರೀ ಬೇಬಿ ಆಗಸ್ಟಿನ್ ಎಂಬ ರೋಗಿಯನ್ನು ಪರೀಕ್ಷಿಸಿದಾಗ ದೀರ್ಘಕಾಲಿಕವಾಗಿ ಅಳವಡಿಸಲಾದ ಪೇಸ್ ಮೇಕರ್ನ ತಂತಿಯಲ್ಲಾದ ತೊಂದರೆಯಿಂದ ರೋಗಿಯು ಬಳಲುತ್ತಿದ್ದಾರೆಂದು ಗುರುತಿಸಲಾಯಿತು.ಡಾ.ಮುಕಂದ್ ಅವರು ಪ್ರಪ್ರಥಮವಾಗಿ ಮಂಗಳೂರಿನಲ್ಲಿ 35 ವರ್ಷಗಳ ಹಿಂದೆ ಈ ರೋಗಿಗೆ ಪೇಸ್ ಮೇಕರ್ ಅಳವಡಿಸಿದ್ದರು.

ಇತ್ತೀಚೆಗೆ ಒಮೇಗಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾದ ರೋಗಿಯನ್ನು ಡಾ|ಮುಕುಂದ್ರವರು ಕೂಲಂಕುಷವಾಗಿ ಪರೀಕ್ಷಿಸಿದಾಗ ಪೇಸ್ ಮೇಕರ್ ತಂತಿಗೆ ಸಂಬಂಧಿಸಿದ ಸೋಂಕು ಈ ಕಾಯಿಲೆಗೆ ಕಾರಣವೆಂದು ಖಾತ್ರಿಪಡಿಸಿ ಎಲೆಕ್ಟೋಫಿಸಿಯಾಲಜಿಸ್ಟ್ ಡಾ|ಯಾಜ್ನಿಕ್ ಅವರಲ್ಲಿ ಸಮಾಲೋಚಿಸಿ ಶಸ್ತ್ರಕ್ರಿಯಾ ರಹಿತವಾಗಿ ಪೇಸ್ ಮೇಕರ್ ತಂತಿಯನ್ನು ಹೊರತೆಗೆಯಲು ನಿರ್ಧರಿಸಲಾಯಿತು ಎಂದರು.
ದಶಕಗಳ ಹಿಂದೆ ಅಳವಡಿಸಲಾದ ಪೇಸ್ ಮೇಕರ್ನ ತಂತಿ (Lead) ಹೊರ ತೆಗೆಯುವುದು ಅತ್ಯಂತ ಕ್ಲಿಷ್ಟಕರವಾದ ಕಾರ್ಯವೆಂದು ಪರಿಗಣಿಸಲಾಗಿದೆ. ಇದು ಪ್ರಮುಖ ಅಭಿದಮನಿಯಲ್ಲಿ ಹುದುಗಿರುವುದರಿಂದ ಇದನ್ನು ಸಾಧಾರಣವಾಗಿ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗುತ್ತದೆ. ಈ ರೋಗಿಗೆ ಶಸ್ತ್ರಚಿಕಿತ್ಸೆ ರಹಿತ ತಂತ್ರಜ್ಞಾನದ ಮುಖಾಂತರ ಈ ಚಿಕಿತ್ಸೆಯನ್ನು ನಡೆಸುವುದು ಒಂದು ಸವಾಲಿನ ಕಾರ್ಯವಾಗಿತ್ತು. ಈ ಕಾರ್ಯಾಚರಣೆಯನ್ನು ಕ್ಯಾಥ್ ಲ್ಯಾಬ್ನಲ್ಲಿ ಒಂದು ಗಂಟೆ ಅವಧಿಯೊಳಗೆ ನಡೆಸಲಾಯಿತು.

ಚಿಕಿತ್ಸೆಯ ಸಮಯದಲ್ಲಿ ರೋಗಿಯ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ನಿರ್ವಹಣೆಯಲ್ಲಿ ನಿರ್ಣಾಯಕ ಜಾಗರೂಕ ಮೇಲ್ವಿಚಾರಣೆ ಮತ್ತು ಅರಿವಳಿಕೆ
ಪಾತ್ರವಹಿಸಿದ ಅರಿವಳಿಕೆ ತಜ್ಞರಾದ ಡಾ.ಮೇಘನಾ ಅವರು ಸಮರ್ಥ ಬೆಂಬಲ ನೀಡಿದರು. ಡಾ ಯಾಜ್ನಿಕ್ ರವರು ವಿಶೇಷವಾದ ಪೇಸ್ ಮೇಕರ್ ಹೊರತೆಗೆಯುವ ಯಾವುದೇ ತೊಡಕುಗಳಿಲ್ಲದೆ 35 ವರ್ಷ ಹಳೆಯ ಅಭಿಧಮನಿಯಲ್ಲಿ ಹುದುಗಿರುವ ತಂತಿಯನ್ನು ಶಸ್ತ್ರಚಿಕಿತ್ಸೆ ಇಲ್ಲದೆ ತೆಗೆದು ಹಾಕುವಲ್ಲಿ ಯಶಸ್ವಿಯಾದರು.
ಈ ಚಿಕಿತ್ಸೆಗೆ ಒಳಗಾದ ರೋಗಿಯು ಚಿಕಿತ್ಸಾ ನಂತರ ಕ್ಷಿಪ್ರವಾಗಿ ಚೇತರಿಸಿಕೊಂಡು ಈಗ ಯಾವುದೇ ಸಮಸ್ಯೆಗಳಿಲ್ಲದೆ ಆರೋಗ್ಯವಾಗಿದ್ದಾರೆ. ಈ ರೀತಿಯಲ್ಲಿ ಒಂದು ದೀರ್ಘಕಾಲದ ಅನಾರೋಗ್ಯವನ್ನು ಒಂದು ಸೂಕ್ಷ್ಮವಾದ ಪ್ರಕ್ರಿಯೆಯಿಂದ ಗುಣಪಡಿಸಲಾಯಿತು.
ಈ ಗಮನಾರ್ಹ ಸಾಧನೆಯು ಒಮೇಗಾ ಆಸ್ಪತ್ರೆಯು ವಿಶ್ವ ದರ್ಜೆಯ ಹೃದ್ರೋಗ ಚಿಕಿತ್ಸೆ ನೀಡುವ ಬದ್ಧತೆಯನ್ನು ತೋರಿಸುತ್ತದೆ. ಮತ್ತು ಸುಧಾರಿತ ಎಲೆಕ್ಟ್ರೋಫಿಸಿಯಾಲಜಿ ಮತ್ತು ಸಂಕೀರ್ಣ ಹೃದಯ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ|ಯಾಜ್ನಿಕ್ ಮುಕುಂದ್, ಎಲೆಕ್ಟ್ರೋ ಫಿಸಿಯಾಲಜಿಸ್ಟ್,ಡಾ|ಮೇಘನಾ ಮುಕುಂದ್, ಅರಿವಳಿಕೆ ತಜ್ಞರು ಹಾಗೂ ಡಾ|ಅಭಿಜಿತ್ ಉಪಸ್ಥಿತರಿದ್ದರು.

