ಮಂಗಳೂರು : ತುಳುನಾಡಿನ ಸರ್ವ ಧರ್ಮೀಯರ ಹಬ್ಬ, ಆಚರಣೆ ಹಾಗೂ ತುಳುನಾಡಿನ ಆಯನ ಜಾತ್ರೆ ಮುಂತಾದ ವಿಶೇಷ ದಿನಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡ “ಕಾಲ ಕೋಂದೆ” ತುಳು ದಿನದರ್ಶಿಕೆಯು 13ನೇ ವರ್ಷದ ಬಿಡುಗಡೆ ಪತ್ರಿಕಾಭವನದಲ್ಲಿ ನಡೆಯಿತು .

ಬಳಿಕ ಮಾತನಾಡಿದ ಪ್ರಥಮ ಡಿಜಿಟಲ್ ತುಳು ಲಿಪಿ ವಿನ್ಯಾಸಕ ಡಾ|ಪ್ರವೀಣ್ ರಾಜ್ ಎಸ್. ರಾವ್ ಅವರು ತುಳುವರ ‘ಸಿಂಗೊಡೆ’ಯಿಂದ ಪ್ರಾರಂಭವಾಗಿ ಸಂಕ್ರಾಂತಿ, ತಿಥಿ, ನಕ್ಷತ್ರಗಳನ್ನು (ಭರಣಿ, ಕಿರ್ತಿಕೆ ಇತ್ಯಾದಿ) ಕೆಡ್ವಾಸ, ತುಳು ದೀಪಾವಳಿ ಬಲಿಲೆಪ್ಪುನ ದಿನ, ಪತ್ತನಾಜೆ, ಆಟಿ, ಸೋಣ, ಮಾರ್ನಮಿ, ಆಯನೊ, ಕೋಲ, ಕೊಡಿ, ತೇರ್, ಜಾತ್ರೆಗಳು ಮೊದಲಾದ ವಿಶೇಷತೆ. ಮೌಡ್ಯ ಹಾಗೆಯೇ ಗ್ರಹಣ ಕಾಲಗಳ ಬಗೆಗೆ ನಿಖರವಾಗಿ ಕ್ಯಾಲೆಂಡರನಲ್ಲಿ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಭೌದ್ಧ, ಜೈನ ಧರ್ಮಗಳ ಹಬ್ಬಗಳ ಬಗೆಗೆ ಮಾಹಿತಿ ನೀಡುವ ಈ ಕ್ಯಾಲೆಂಡರ್ ನಾಡಿನ ಸಮಸ್ತರಿಗೆ ಬಹುಪಯೋಗಿ ದಿನದರ್ಶಿಕೆಯಾಗಲಿದೆ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ ,ತುಳುವಿನಲ್ಲಿ ಸಮಗ್ರ ಹಬ್ಬ, ಹರಿದಿನ, ಜಾತ್ರೆಗಳ ಬಗೆಗಿನ ಮಾಹಿತಿ ನೀಡುತ್ತಿರುವ ತುಳು-ಕನ್ನಡ “ಕಾಲಕೋಂದೆ’ ಕ್ಯಾಲೆಂಡರನ್ನು ತುಳುವಿನ ಪ್ರಥಮ ಗಣಕೀಕೃತ ಲಿಪಿ “ತೌಳವ” ದ ವಿನ್ಯಾಸಕಾರ ಡಾ| ಪ್ರವೀಣ್ ರಾಜ್ ಎಸ್ ರಾವ್ ( ಆರ್ ಸಿ ಎಸ್ ಎಸ್ ) ಅವರು ತಯಾರು ಮಾಡಿದ್ದಾರೆ. “ತೌಳವ” ತುಳು ಲಿಪಿ ತಂತ್ರಾಂಶ’ದ ಸಹಾಯದಿಂದ ವರ್ಷಗಳಿಂದ ಪ್ರತೀ ವರ್ಷವೂ ಕ್ಯಾಲೆಂಡರನ್ನು ತಯಾರಿಸುತ್ತಿದ್ದು, ಸಾರ್ವಜನಿಕರಿಗೆ ಉಚಿತವಾಗಿ ನೀಡುತ್ತಾ ಬಂದಿರಿರುವುದು ನಿಜಕ್ಕೂ ಉತ್ತಮವಾದ ಕೆಲಸವೆಂದು ಶ್ಲಾಘಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಆರ್ ಸಿಎಸ್ಎಸ್ ನ ತಾಂತ್ರಿಕ ಸಹಲಹೆಗಾರರಾದ ವಿವೇಕ್,ತುಳು ಪರಿಷತ್ ನ ಅಧ್ಯಕ್ಷರಾದ ಶುಭೋದಯ ಆಳ್ವ ,ಸದಸ್ಯರಾದ ರಾಮಕೃಷ್ಣ ಮುಂತಾದವರು ಉಪಸ್ಥಿತರಿದ್ದರು .

