ಮಂಗಳೂರು : ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧೆ ಸೀಸನ್ 9ರ ಪ್ರಯುಕ್ತ ಭಾರತೀಯ ಜೈನ್ ಮಿಲನ್, ವಲಯ-8ರ ಆಶ್ರಯದಲ್ಲಿ ಈ ಬಾರಿ ಮಂಗಳೂರು ಜೈನ್ ಮಿಲನ್ನ ಅತಿಥೇಯದಲ್ಲಿ ಪಿಲಿಕುಳ ನಿಸರ್ಗಧಾಮದ ಸೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ಜನವರಿ 3 ರಂದು ಸೆಮಿಫೈನಲ್ ಹಾಗೂ ಜನವರಿ 4 ರಂದು ಫೈನಲ್ ಜಿನ ಭಜನಾ ಸ್ಪರ್ಧೆ ನಡೆಯಲಿದೆ ಎಂದು ಜೈನ್ ಮಿಲನ್, ವಲಯ-8ರ ನಿಕಟಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಜೈನ್ ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಬಗ್ಗೆ ಸಮಿತಿಯ ಉಪಾಧ್ಯಕ್ಷರಾದ ಸುದರ್ಶನ್ ಜೈನ್ ಹೆಚ್ಚಿನ ಮಾಹಿತಿಯನ್ನು ನೀಡಿ,ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಜೈನ ಧರ್ಮದ ತತ್ವ, ಅಹಿಂಸೆ, ಆತ್ಮಶುದ್ಧಿ ಹಾಗೂ ಭಕ್ತಿ ಮಾರ್ಗವನ್ನು ಸಂಗೀತ, ಭಜನೆ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗಳ ಮೂಲಕ ಜನತೆಗೆ ತಲುಪಿಸುವುದಾಗಿದೆ. ಜೈನ ಸಂಪ್ರದಾಯದ ಗಣ್ಯ ಆಚಾರ್ಯರು,ಪೂಜ್ಯ ಸ್ವಾಮೀಜಿಗಳ ಆಶೀರ್ವಚನ ಹಾಗೆಯೇ ಸಮಾಜದ ಹಿರಿಯ ಪ್ರಮುಖ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಭಾರತದ ಸಮೃದ್ಧ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಪರಂಪರೆಯನ್ನು ಜನಸಾಮಾನ್ಯರೊಳಗೆ ಇನ್ನಷ್ಟು ಆಳವಾಗಿ ಬೆಳೆಸುವ ಉದ್ದೇಶದೊಂದಿಗೆ ಜಿನ ಭಜನಾ ಸ್ಪರ್ದೆ ಸೀಸನ್ 9ರ ಕಾರ್ಯಕ್ರಮವನ್ನು ಭವ್ಯವಾಗಿ ಆಯೋಜಿಸಲಾಗಿದೆ. ಈ ಎರಡು ದಿನಗಳಲ್ಲಿ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸ್ಪರ್ದೆಯು ಸೀನಿಯರ್ ಮತ್ತು ಜೂನಿಯರ್ ಎಂಬ ಎರಡು ವಿಭಾಗದ ಲ್ಲಿ ನಡೆಯಲಿದೆ,ಭಾಗವಹಿಸುವ ಸ್ಪರ್ಧಿಗಳಿಗೆ ಪ್ರೋತ್ಸಾಹ ಧನ ಮತ್ತು ವಿಜೇತ ತಂಡಗಳಿಗೆ ನಗದು ಮತ್ತು ರೋಲಿಂಗ್ ಶೀಲ್ಡ್ ಹಸ್ತಾಂತರ ಮಾಡಲಾಗುವುದು,ಕೇವಲ ಜಿನ ಕನ್ನಡ ಭಜನೆಗಳಿಗೆ ಮಾತ್ರ ಆಸ್ಪದವನ್ನು ನೀಡಲಾಗುವುದೆಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಪುಷ್ಪರಾಜ್ , ರತ್ನಾಕರ್ ಜೈನ್ , ವೈಶಾಲಿ ಪಡಿವಾಳ್, ಪ್ರಿಯದರ್ಶಿನಿ ಮೊದಲಾದವರು ಉಪಸ್ಥಿತರಿದ್ದರು .

