ಢಾಕಾ : ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಮೇಲೆ ಗಂಭೀರ ಹಲ್ಲೆ ನಡೆಸಿ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಹಿಂದೂ ಉದ್ಯಮಿಯೊಬ್ಬರು ಕ್ರೂರ ಗುಂಪು ದಾಳಿಯಿಂದ ಸ್ವಲ್ಪದರಲ್ಲೇ ಬದುಕುಳಿದಿದ್ದು, ಕಳೆದ ಎರಡು ವಾರಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆದ ನಾಲ್ಕನೇ ದಾಳಿ ಇದಾಗಿದೆ.

ಕೋನೇಶ್ವರ ಒಕ್ಕೂಟದ ಕುರ್ಭಂಗಾ ಬಜಾರ್ ಬಳಿಯ ದಾಮುದ್ಯ ಪ್ರದೇಶದಲ್ಲಿ ರಾತ್ರಿ 9.30 ರ ಸುಮಾರಿಗೆ ಈ ಘಟನೆ ನಡೆದಿದೆ. 50 ವರ್ಷದ ಖೋಕನ್ ಚಂದ್ರದಾಸ್ ಅವರು ಕೇಯೂರ್ಭಂಗಾ ಬಜಾರ್ನಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಔಷಧಾಲಯವನ್ನು ನಡೆಸುತ್ತಿದ್ದರು. ಬುಧವಾರ ರಾತ್ರಿ, ಅಂಗಡಿ ಮುಚ್ಚಿ ಆಟೋರಿಕ್ಷಾದಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ, ಮಾರುಕಟ್ಟೆ ಬಳಿಯ ದಾಮುದ್ಯ-ಶರಿಯತ್ಪುರ ರಸ್ತೆಯಲ್ಲಿ ದಾಳಿಕೋರರು ವಾಹನವನ್ನು ತಡೆದು ಅವರ ಮೇಲೆ ತಲವಾರಿನಿಂದ ಇರಿದು ಹಲ್ಲೆ ನಡೆಸಿ ಅವರ ಮೇಲೆ ಬೆಂಕಿ ಹಚ್ಚಲಾಯಿತು. ಆದರೆ ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅವರು ತನ್ನನ್ನು ತಾನು ಉಳಿಸಿಕೊಳ್ಳುವ ಹತಾಶ ಪ್ರಯತ್ನದಲ್ಲಿ ರಸ್ತೆ ಬದಿಯಲ್ಲಿರುವ ಹತ್ತಿರದ ಕೊಳಕ್ಕೆ ಹಾರಿದರು. ಅವರ ಕಿರುಚಾಟ ಕೇಳಿ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿದರು, ಜನರನ್ನು ಕಂಡು ದಾಳಿಕೋರರು ಓಡಿ ಹೋಗಿದ್ದಾರೆ.

ನಂತರ ಸ್ಥಳೀಯರು ಅವರನ್ನು ರಕ್ಷಿಸಿ ಶರಿಯತ್ಪುರ ಸದರ್ ಆಸ್ಪತ್ರೆಗೆ ದಾಖಲಿಸಿದರು, ಅಲ್ಲಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಅಲ್ಲಿ ಅವರಿಗೆ ತುರ್ತು ಚಿಕಿತ್ಸಾ ವಾರ್ಡ್ನಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಗಾಯಗಳು ಗಂಭೀರವಾಗಿದ್ದ ಕಾರಣ ರಾತ್ರಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಢಾಕಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಭಾರತ ವಿರೋಧಿ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆಯ ನಂತರ ನಡೆದ ಹಿಂಸಾತ್ಮಕ ಘಟನೆಗಳ ಸರಣಿಯ ನಡುವೆಯೇ ಈ ದಾಳಿಯು ಬಾಂಗ್ಲಾದೇಶದ ಹಿಂದೂ ಸಮುದಾಯವನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಹಾದಿ ಸಾವಿನ ವಿರುದ್ಧದ ಪ್ರತಿಭಟನೆಗಳು ಭಾರತ ವಿರೋಧಿ ತಿರುವು ಪಡೆದುಕೊಂಡಿದ್ದು, ಶಂಕಿತರು ಭಾರತಕ್ಕೆ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ

