ಮಂಗಳೂರು: ಬೈಕಾಡಿ ಪ್ರತಿಷ್ಠಾನ (ರಿ.) ಮಂಜೂಷಾ, ಉರ್ವ,ಹೊಗೆಬೈಲು ವತಿಯಿಂದ ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 5 ರಂದು ಸೋಮವಾರ ಸಂಜೆ 4 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಭರತ್ ರಾಜ್ ಬೈಕಾಡಿಯವರು ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬೈಕಾಡಿ ಜನಾರ್ದನ ಆಚಾರ್ ಅವರು ಸಮಾಜ ಸೇವಕರಾಗಿ, ನಾಟಕ ನಿರ್ದೇಶಕರಾಗಿ, ಕಲಾರಾಧಾಕರಾಗಿ, ವೃತ್ತಿ ಜೀವನದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ಮಾತ್ರವಲ್ಲದೆ ಪಠ್ಯೇತರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಅಗತ್ಯತೆಯನ್ನು ಕಂಡುಕೊಂಡು ವಿದ್ಯಾರ್ಥಿಗಳು ಅದರಲ್ಲಿ ತೊಡಗಿಕೊಳ್ಳಲು ಮಾರ್ಗದರ್ಶನ ನೀಡಿದವರು.
ಅವರ ಧೈಯೋದ್ದೇಶಗಳನ್ನು ಮುಂದುವರಿಸಿಕೊಂಡು ಹೋಗುವ ಮತ್ತು ಶಿಕ್ಷಣ, ಕಲೆ, ಸಾಹಿತ್ಯ, ಸಮಾಜಸೇವೆ ಹಾಗೂ ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 5 ಜನವರಿ 2021ರಲ್ಲಿ ಬೈಕಾಡಿ ಪ್ರತಿಷ್ಠಾನವನ್ನು ಹುಟ್ಟು ಹಾಕಲಾಯಿತು. ಪ್ರತಿ ವರ್ಷದಂತೆ ಬೈಕಾಡಿಯವರ ಹುಟ್ಟುಹಬ್ಬದಂದು “ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ”ಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತರಿಗೆ ಬೈಕಾಡಿ ಪ್ರತಿಷ್ಠಾನವು ನೀಡುತ್ತಾ ಬಂದಿದೆ.

ಇದೇ ಜನವರಿ 5, 2026ರಂದು ಬೈಕಾಡಿಯವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ‘ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ”ಯನ್ನು ಈ ಬಾರಿ ಹಿರಿಯ ಜನಪದ ಕಲಾವಿದ ಶ್ರೀ ರಮೇಶ್ ಕಲ್ಮಾಡಿಯವರಿಗೆ ನೀಡಿ ಗೌರವಿಸಲಾಗುವುದು ಅದೇ ರೀತಿ ಹಿರಿಯ ಭರತನಾಟ್ಯ ಗುರುಗಳಾದ ಶ್ರೀ ಮೋಹನ್ ಕುಮಾರ್ ಉಳ್ಳಾಲ್ ಅವರು ನೃತ್ಯ ಕ್ಷೇತ್ರದಲ್ಲಿ ಮಾಡಿದ ಅಪೂರ್ವ ಸೇವೆಗಾಗಿ ‘ಜೀವಮಾನ ಸಾಧನಾ ಪುರಸ್ಕಾರ’ ಮತ್ತು ಶಿಕ್ಷಕ, ಪಕ್ಷಿ ವೀಕ್ಷಕ ಮತ್ತು ಕಲಾವಿದರಾದ ಶ್ರೀ ಅರವಿಂದ ಕುಡ್ಲ ಇವರಿಗೆ “ಯುವ ಪುರಸ್ಕಾರ’ ನೀಡಿ ಗೌರವಿಸಲಿದ್ದೇವೆ ಎಂದರು.
ನೃತ್ಯ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ನೃತ್ಯ ಗುರುಗಳ ಭಾವಚಿತ್ರ ಮತ್ತು ವಿವರವನ್ನೊಳಗೊಂಡ ಕ್ಯಾಲೆಂಡರ್ ಇದೇ ವೇದಿಕೆಯಲ್ಲಿ ಡಾ.ಎಂ.ಮೋಹನ ಆಳ್ವ ಇವರ ಅಮೃತಹಸ್ತದಿಂದ ಲೋಕಾರ್ಪಣೆಗೊಳ್ಳಲಿದೆ. ವೇದಿಕೆಯಲ್ಲಿ ಗೌರವಾನ್ವಿತರಾದ ಸುನಿಲ್ ಕುಮಾರ್ ವಿ.ಶಾಸಕರು. ಕಾರ್ಕಳ, ಕ್ಯಾ.ಗಣೇಶ್ ಕಾರ್ಣಿಕ್,ಡಾ.ರಾಮಕೃಷ್ಣ ಆಚಾರ್,ಡಾ.ಕೆ ಚಿನ್ನಪ್ಪ ಗೌಡ,ಮತ್ತು ಲ /ಸುಧಾಕರ ಆಚಾರ್ಯ ಉಪಸ್ಥಿತರಿರುತ್ತಾರೆ. ಸಭಾ ಕಾರ್ಯಕ್ರಮದ ಬಳಿಕ ಮಂಡ್ಯ ರಮೇಶ್ ತಂಡ “ನಟನ ರಂಗ ಶಾಲೆ” ಮೈಸೂರು ಇಲ್ಲಿಯ ಕಲಾವಿದರಿಂದ “ಭಾಸ ಪಂಚಕ” (ಭಾಸ ಮಹಾಕವಿಯ 5 ನಾಟಕಗಳ ಸಂಕಲಿತ ರೂಪ) ಎಂಬ ಕನ್ನಡ ನಾಟಕ ನಡೆಯಲಿದೆ.ಸರ್ವರಿಗೂ ಉಚಿತ ಪ್ರವೇಶವಿದ್ದು ಕಲಾಸಕ್ತರೆಲ್ಲರಿಗೂ ಭಾಗವಹಿಸಬೇಕಾಗಿ ವಿನಂತಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ರತ್ನಾವತಿ ಜೆ. ಬೈಕಾಡಿ ಅಧ್ಯಕ್ಷರು, ಬೈಕಾಡಿ ಪ್ರತಿಷ್ಠಾನ (ರಿ)ಮಂಗಳೂರು, ಶ್ರೀಮತಿ ರೇಖಾ ಬೈಕಾಡಿ ಹಾಗೂ ಶ್ರೀಮತಿ ಮಾಧುರಿ ಶ್ರೀರಾಮ್ ಉಪಸ್ಥಿತರಿದ್ದರು.

