ಧಾರವಾಡ : ಇಲ್ಲಿಗೆ ಸಮೀಪದ ತಾಲೂಕಿನ ಹೆಬ್ಬಳ್ಳಿ ಶಿವಾನಂದಮಠದ ಲಿಂಗೈಕ್ಯ ಶ್ರೀವಾಸುದೇವ ಸ್ವಾಮೀಜಿ ಹಾಗೂ ಲಿಂಗೈಕ್ಯ ಶ್ರೀಬಸವರಾಜ ಸ್ವಾಮೀಜಿ ಪುಣ್ಯಾರಾಧನೆ ನಿಮಿತ್ತ 10 ದಿನಗಳ ಆಧ್ಯಾತ್ಮ ಚಿಂತನ ಸಮಾವೇಶ ಶುಕ್ರವಾರ (ಜ.9 ರಂದು) ಹೆಬ್ಬಳ್ಳಿಯಲ್ಲಿ ಆರಂಭಗೊಳ್ಳಲಿದೆ.

ಹೆಬ್ಬಳ್ಳಿ ಶಿವಾನಂದಮಠದ ಪ್ರಸ್ತುತ ಶ್ರೀಗಳಾದ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗದಗ ಶಿವಾನಂದಮಠದ ಪೀಠಾಧಿಪತಿ ಶ್ರೀಅಭಿನವ ಶಿವಾನಂದ ಸ್ವಾಮೀಜಿ ಶುಕ್ರವಾರ ಮುಂಜಾನೆ 8 ಗಂಟೆಗೆ ಪ್ರಣವ ಧ್ವಜಾರೋಹಣ ಮಾಡಿ ಈ ಧರ್ಮ ಸಮಾವೇಶ ಉದ್ಘಾಟಿಸುವರು. ಗದಗ ನಗರದ ಶಿವಶರಣೆ ಮುಕ್ತಾತಾಯಿ ಹಾಗೂ ಹೊನ್ನಿಹಾಳದ ಸಂತೋಷ ಶಾಸ್ತ್ರೀಗಳು ಜ.9 ರಿಂದ 18 ರವರೆಗೆ ನಿತ್ಯ ಪ್ರಾತಃಕಾಲ 8 ರಿಂದ 10 ಗಂಟೆಯವೆರೆಗೆ ಹಾಗೂ ಸಂಜೆ 7 ರಿಂದ ರಾತ್ರಿ 10 ಗಂಟೆಯವರೆಗೆ ವಿವಿಧ ಆಧ್ಯಾತ್ಮ ವಿಷಯಗಳ ಮೇಲೆ ಪ್ರವಚನ-ಕೀರ್ತನ ನೀಡುವರು.
ಉಪದೇಶಾಮೃತ : ಗವಿಪುರಂ ಗೋಸಾವಿ ಪೀಠದ ಶ್ರೀಮಂಜುನಾಥ ಸ್ವಾಮೀಜಿ, ಹೆಬ್ಬಳ್ಳಿ ಬ್ರಹ್ಮಚೈತನ್ಯಾಶ್ರಮದ ಶ್ರೀದತ್ತಾವಧೂತ ಸ್ವಾಮೀಜಿ ಜೊತೆಗೆ ಹಳಕಟ್ಟಿ, ಇಬ್ರಾಹಿಂಪೂರ, ಬೈಲಹೊಂಗಲ, ಕರೀಕಟ್ಟಿ, ಲೋಕಾಪೂರ, ಶಿರಂಜು, ಪರಮಾನಂದವಾಡಿ, ಹರಳಕಟ್ಟಿ, ದಾದನಟ್ಟಿ, ಕುಸೂಗಲ್ಲ, ರನ್ನತಿಮ್ಮಾಪೂರ, ಗದಗ ನಗರದ ವಿವಿಧ ಅದ್ವೆತಮಠಗಳ ಸ್ವಾಮೀಜಿಯವರು, ಶಿವಶರಣೆಯರು ಮತ್ತು ವಿವಿಧ ಸಾಧಕ ಶ್ರೀಗಳು 10 ದಿನಗಳ ಸಮಾವೇಶದಲ್ಲಿ ಪಾಲ್ಗೊಂಡು ಉಪದೇಶಾಮೃತ ನೀಡುವರು.

ಪ್ರಾಣಪ್ರತಿಷ್ಠಾಪನೆ : ಜ.19 ರಂದು ಪ್ರಾತಃಕಾಲದಲ್ಲಿ ಲಿಂಗೈಕ್ಯ ಶ್ರೀವಾಸುದೇವ ಸ್ವಾಮೀಜಿ ಹಾಗೂ ಲಿಂಗೈಕ್ಯ ಶ್ರೀಬಸವರಾಜ ಸ್ವಾಮೀಜಿಯವರ ಗದ್ದುಗೆಗಳಿಗೆ ರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ ನಡೆಯಲಿದ್ದು, ನಂತರ ಲಿಂಗೈಕ್ಯ ಶ್ರೀಬಸವರಾಜ ಸ್ವಾಮೀಜಿಯವರ ನೂತನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಜರುಗುವುದು.
ರಥೋತ್ಸವ : ಗದಗ ಶಿವಾನಂದಮಠದ ಪೀಠಾಧಿಪತಿ ಶ್ರೀಅಭಿನವ ಶಿವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಾಡಿನ ಅನೇಕ ಭಾಗಗಳ ಹರ-ಗುರು ಚರಮೂರ್ತಿಗಳ ನೇತೃತ್ವದಲ್ಲಿ ಜ.19 ರಂದು ಸಂಜೆ 5 ಗಂಟೆಗೆ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ಶ್ರೀಮಠದ ಲಿಂಗೈಕ್ಯ ಶ್ರೀವಾಸುದೇವ ಸ್ವಾಮೀಜಿ ರಥೋತ್ಸವ ಜರುಗುವುದು. ಅಪರಾಹ್ನ ದಾಸೋಹ ಸೇವೆಯಲ್ಲಿ ಅನ್ನಸಂತರ್ಪಣೆ ನಡೆಯುವುದು. ವಿವಿಧ ಕಲಾವಿದರಿಂದ ನಿತ್ಯವೂ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹು.ಧಾ. ಮಹಾನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸದ್ಭಕ್ತರು ಪಾಲ್ಗೊಳ್ಳುವರೆಂದು ಸಮಾವೇಶದ ಸಂಚಾಲಕ ಶಿಕ್ಷಕ ಶಿವಾನಂದ ಹೂಗಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

