ನವದೆಹಲಿ: ಪಾಕಿಸ್ತಾನದ ನಂಕಾನ ಗುರುನಾನಕ್ ಜಯಂತಿ ಪ್ರಯುಕ್ತ ತೀರ್ಥಯಾತ್ರೆಗೆ ಹೋಗಿದ್ದ ಭಾರತದ ಪಂಜಾಬಿ ಮಹಿಳೆ ನಾಪತ್ತೆಯಾಗಿದ್ದು, ಇದೀಗ ನಾಪತ್ತೆ ಕೇಸಿಗೆ ಟ್ವಿಸ್ಟ್ ದೊರಕಿದೆ.
ಪಾಕಿಸ್ತಾನಕ್ಕೆ ತೆರಳಿದ ಪಂಜಾಬಿ ಮಹಿಳೆ ಸರಬ್ಜಿತ್ ಕೌರ್ ತನ್ನ ಪಾಕಿಸ್ತಾನಿ ಪ್ರಿಯಕರನೊಂದಿಗೆ ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ಅವರನ್ನು ಸೋಮವಾರ ಪಾಕಿಸ್ತಾನ ಸರ್ಕಾರ ಭಾರತಕ್ಕೆ ಗಡೀಪಾರು ಮಾಡುವ ಸಾಧ್ಯತೆ ಇದೆ. ಅವರನ್ನು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಕರೆತರುವ ನಿರೀಕ್ಷೆಯಿದೆ.

ಗುರುನಾನಕ್ ಅವರ ಜನ್ಮ ದಿನಾಚರಣೆಯಂದು ಪಾಕಿಸ್ತಾನಕ್ಕೆ ತೀರ್ಥಯಾತ್ರೆಗೆ ತೆರಳಿದ್ದ ಸರಬ್ಜಿತ್, ನಂತರ ಪಾಕಿಸ್ತಾನಿ ವ್ಯಕ್ತಿಯನ್ನು ಮದುವೆಯಾಗಿ ಇಸ್ಲಾಂಗೆ ಮತಾಂತರಗೊಂಡಿದ್ದು ದೊಡ್ಡ ವಿವಾದವಾಗಿತ್ತು. ಸರಬ್ಜೀತ್ ಕೌರ್ ಎಂಬ 52 ವರ್ಷದ ಮಹಿಳೆ,ಪಂಜಾಬಿನ ತಲ್ವಾಂಡಿ ಚೌಧರಿಯನ್ ಪೊಲೀಸ್ ಠಾಣೆ ವ್ಯಾಪ್ತಿಯ ಕಪುರ್ತಲಾ ಜಿಲ್ಲೆಯ ಅಮಾನಿಪುರ ಗ್ರಾಮದವರು.
ಈ ವರ್ಷದ ಪ್ರಕಾಶ್ ಪರ್ವ್ ಗುರುನಾನಕ್ ದೇವ್ ಅವರ 555 ನೇ ಜನ್ಮ ದಿನಾಚರಣೆಯ ಅಂಗವಾಗಿ 1,932 ಸಿಖ್ ಸದಸ್ಯರ ತಂಡದೊಂದಿಗೆ ತೀರ್ಥಯಾತ್ರೆಯ ಭಾಗವಾಗಿ ಅವರು ನವೆಂಬರ್ 4, 2025 ರಂದು ಪಾಕಿಸ್ತಾನಕ್ಕೆ ಹೊರಟಿದ್ದರು. ತಂಡ ನವೆಂಬರ್ 13 ರಂದು ಗುರುನಾನಕ್ ಗುರುದ್ವಾರದ ದರ್ಶನ ಮುಗಿಸಿ ಹಿಂತಿರುಗಿತು, ಆದರೆ ಸರಬ್ಜೀತ್ ಕೌರ್ ಗುಂಪಿನಿಂದ ತಪ್ಪಿಸಿಕೊಂಡು ಪಾಕಿಸ್ತಾನದಲ್ಲಿಯೇ ಉಳಿದರು,ನಂತರ ಅವರು ಇಸ್ಲಾಂಗೆ ಮತಾಂತರಗೊಂಡು ನೂರ್ ಹುಸೇನ್ ಎಂದು ಹೆಸರನ್ನು ಬದಲಾಯಿಸಿ ನವೆಂಬರ್ 5 ರಂದು ಲಾಹೋರ್ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶೇಖುಪುರ ಜಿಲ್ಲೆಯ ನಾಸಿರ್ ಹುಸೇನ್ ಅವರನ್ನು ವಿವಾಹವಾದರು

ಸರಬ್ಜೀತ್ ಕೌರ್ ಮತ್ತು ನಜೀರ್ ಅವರನ್ನು ಪಾಕಿಸ್ತಾನ ಗುಪ್ತಚರ ಬ್ಯೂರೋ ಮತ್ತು ಸ್ಥಳೀಯ ಪೊಲೀಸರು ಸೋಮವಾರ ನಂಕಾನಾ ಸಾಹಿಬ್ ಬಳಿಯ ಹಳ್ಳಿಯಲ್ಲಿ ಬಂಧಿಸಿದ್ದಾರೆ. ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧಕ್ ಸಮಿತಿ (ಪಿಎಸ್ಜಿಪಿಸಿ) ಅಧ್ಯಕ್ಷ ಮತ್ತು ಪಂಜಾಬ್ ಸಚಿವ ರಮೇಶ್ ಸಿಂಗ್ ಅರೋರಾ ಬಂಧನವನ್ನು ದೃಢಪಡಿಸಿದ್ದಾರೆ ಮತ್ತು ಅವರ ಸಿಂಗಲ್-ಎಂಟ್ರಿ ವೀಸಾಗಳು ಅವಧಿ ಮುಗಿದಿರುವುದರಿಂದ ಅವರನ್ನು ಭಾರತಕ್ಕೆ ಗಡೀಪಾರು ಮಾಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ಕೌರ್ ತಾನು ಈ ಹಿಂದೆ ಮದುವೆಯಾಗಿ ಇಬ್ಬರು ಗಂಡು ಮಕ್ಕಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದರು, ಆದರೆ ನಂತರ ವಿಚ್ಛೇದನ ಪಡೆದಿರುವುದಾಗಿ ಹೇಳಿಕೊಂಡಿದ್ದರು. ಸರಬ್ಜಿತ್ ಕೌರ್ ಒಂದು ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ತಾನು ದುಬೈನಲ್ಲಿ ಕೆಲಸ ಮಾಡುವಾಗ ನಾಸಿರ್ ಹುಸೇನ್ ಅವರನ್ನು ಭೇಟಿಯಾಗಿದ್ದೆ ಮತ್ತು ಒಂಬತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ತನ್ನ ಗ್ರಾಮದಲ್ಲಿ ಯಾರೊಂದಿಗೂ ಅಷ್ಟೊಂದು ಸಂಪರ್ಕಗಳನ್ನು ಹೊಂದಿರದ ಸರಬ್ಜಿತ್ ಕೌರ್ ಭಾರತದಲ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಿದ್ದರು ಮತ್ತು ಅವರ ಕುಟುಂಬವು ಅವರ ವಿರುದ್ಧ ವೇಶ್ಯಾವಾಟಿಕೆ ಸೇರಿದಂತೆ 10 ಕ್ಕೂ ಹೆಚ್ಚು ಪ್ರಕರಣಗಳನ್ನು ಹೊಂದಿದೆ ಎಂದು ಅವರ ಗ್ರಾಮಸ್ಥರು ತಿಳಿಸಿದ್ದಾರೆ. ಏತನ್ಮಧ್ಯೆ, ಇಂತಹ ಅಪರಾಧ ಹಿನ್ನೆಲೆಯ ವ್ಯಕ್ತಿಗೆ ತೀರ್ಥಯಾತ್ರೆಗೆ ವೀಸಾ ಹೇಗೆ ಸಿಕ್ಕಿತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

