ದುಬೈ: ದುಬೈನ ಅಲ್ ಶಹಾಮಾ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಕೇರಳದ ನಾಲ್ವರು ಮಕ್ಕಳು ಮತ್ತು ಮನೆ ಕೆಲಸದಾಕೆ ಸಾವನ್ನಪ್ಪಿದ್ದಾರೆ.
ಮ್ರತರನ್ನು ಅಬ್ದುಲ್ ಲತೀಫ್ ಮುಲ್ಲೈಯನ್ ಅವರ ನಾಲ್ವರು ಮಕ್ಕಳಾದ ಅಯಾಶ್ (5), ಅಜ್ಜಮ್ (8), ಅಮ್ಮರ್ (12) ಮತ್ತು ಅಶಾಜ್ (14) ಮತ್ತು ಕುಟುಂಬದ ಮನೆಕೆಲಸದಾಕೆ 49 ವರ್ಷದ ಬುಶ್ರಾ ಫಯಾಜ್ ಯಾಹು ಎಂದು ಗುರುತಿಸಲಾಗಿದೆ. ಮ್ರತ ಮಕ್ಕಳ ಪೋಷಕರು ಮತ್ತು ಈಗ ಬದುಕುಳಿಯುವ ಏಕೈಕ ಹತ್ತು ವರ್ಷದ ಮಗಳು ಇಜ್ಜಾ ಗಂಭೀರ ಗಾಯಗಳಾಗಿದ್ದು ಅವರು ಪ್ರಸ್ತುತ ಅಬುಧಾಬಿಯ ಶೇಖ್ಬೌತ್ ಮೆಡಿಕಲ್ ಸಿಟಿ (ಎಸ್ಎಸ್ಎಂಸಿ)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇರಳ ಮೂಲದ ಈ ಕುಟುಂಬವು ಅಬುಧಾಬಿಯಲ್ಲಿ ನಡೆದ ಜನಪ್ರಿಯ ಲಿವಾ ಉತ್ಸವದಲ್ಲಿ ಭಾಗವಹಿಸಿ ದುಬೈನಲ್ಲಿರುವ ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಅವರ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಬುಧಾಬಿ- ದುಬೈ ರಸ್ತೆಯ ಶಹಾಮಾ ಬಳಿ ಈ ಅಪಘಾತ ಸಂಭವಿಸಿದೆ.

ಅಶಾಜ್, ಅಮ್ಮರ್ ಮತ್ತು ಅಯಾಶ್ ತಕ್ಷಣವೇ ಸಾವನ್ನಪ್ಪಿದರೆ, ಅಜಮ್ ಸೋಮವಾರ ಸಂಜೆ ಶೇಖ್ ಶಖ್ಬೌಟ್ ವೈದ್ಯಕೀಯ ನಗರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಕುಟುಂಬದ ಇಚ್ಛೆಗೆ ಅನುಗುಣವಾಗಿ, ನಾಲ್ವರು ಮಕ್ಕಳನ್ನು ಯುಎಇಯಲ್ಲಿ ಸಮಾಧಿ ಮಾಡಲಾಗುವುದು,ಮತ್ತು ಮನೆ ಕೆಲಸದಾಕೆ ಬುಶ್ರಾ ಫಯಾಜ್ ಅವರ ಶವವನ್ನು ಆಕೆಯ ಕುಟುಂಬದವರಿಗೆ ಅಂತ್ಯಕ್ರಿಯೆಗಾಗಿ ಕೇರಳಕ್ಕೆ ಹಿಂತಿರುಗಿಸಲಾಗುವುದು.

