ಮಂಗಳೂರು : ಶ್ರೀನಿವಾಸ ವಿಶ್ವವಿದ್ಯಾಲಯದ ನಿರ್ವಹಣೆ ಮತ್ತು ವಾಣಿಜ್ಯ ಸಂಸ್ಥೆಯ ಎಂ.ಬಿ.ಎ. ವಿಭಾಗವು ಜನವರಿ10 ರಂದು ಎಂ.ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಪಾಂಡೇಶ್ವರದ ಶ್ರೀನಿವಾಸ ಕಾಲೇಜಿನ ಕ್ಯಾಂಪಸ್ನಲ್ಲಿ ಉದ್ಯೋಗಾವಕಾಶ (ಪ್ಲೇಸ್ಟೆಂಟ್) ಅಭಿಯಾನವನ್ನು ಮೂರನೇ ಬಾರಿಗೆ ಆಯೋಜಿಸುತ್ತಿದೆ.ಎಂದು ನಿರ್ವಹಣೆ ಮತ್ತು ವಾಣಿಜ್ಯ ಸಂಸ್ಥೆಯ ಡೀನ್ ಡಾ. ವೆಂಕಟೇಶ್ ಎಸ್. ಅಮಿನ್ ಅವರು ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಅಭಿಯಾನವು ವಿದ್ಯಾರ್ಥಿಗಳಿಗೆ ಪ್ರಮುಖ ಸಂಸ್ಥೆಗಳೊಂದಿಗೆ ನೇರವಾಗಿ ಸಂವಹನ ನಡೆಸುವ ಹಾಗೂ ವಿವಿಧ ವೃತ್ತಿ ಅವಕಾಶಗಳನ್ನು ಅನ್ವೇಷಿಸುವ ಮಹತ್ವದ ವೇದಿಕೆಯನ್ನು ಒದಗಿಸುತ್ತದೆ.ಇದು ಉದ್ಯಮ-ಶೈಕ್ಷಣಿಕ ಸಹಕಾರವನ್ನು ಬಲಪಡಿಸುವ ಹಾಗೂ ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಸಂಸ್ಥೆಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಈ ಪ್ಲೇಸ್ಟೆಂಟ್ ಅಭಿಯಾನದಲ್ಲಿ ವಿವಿಧ ಕ್ಷೇತ್ರಗಳ ಹಲವು ಪ್ರತಿಷ್ಠಿತ ಸಂಸ್ಥೆಗಳು ಭಾಗವಹಿಸುವ ನಿರೀಕ್ಷೆಯಿದೆ. ಭಾಗವಹಿಸುವ ಸಂಸ್ಥೆಗಳಲ್ಲಿ ಮೈಕ್ರೋ ಡಿಗ್ರಿ ಪ್ರೈವೇಟ್ ಲಿಮಿಟೆಡ್,ಇನ್ವೆಂಜರ್ ಟೆಕ್ನಾಲಜೀಸ್, ಕೆ-ಟೆಕ್ ಇನೋವೇಷನ್, ಭಾರತ್ ಮೋಟಾರ್ಸ್ – ಮಾರುತಿ ಸುಜುಕಿ, ಕರ್ನಾಟಕ ಏಜೆನ್ಸಿಸ್, ಎ.ಜೆ. ಆಸ್ಪತ್ರೆ ಹಾಗೂ ಎಂ/ಎಸ್ ಅಕೋಲೇಡ್ ಸೊಲೂಶನ್ಸ್ ಪ್ರೈವೇಟ್ ಲಿಮಿಟೆಡ್ ಸೇರಿವೆ. ಈ ಸಂಸ್ಥೆಗಳು ತಂತ್ರಜ್ಞಾನ, ನವೋದ್ಯಮ, ಆಟೋಮೊಬೈಲ್, ಆರೋಗ್ಯಸೇವೆ, ಸಲಹಾ ಹಾಗೂ ಸೇವಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದು, ಮಾರುಕಟ್ಟೆ ಹಣಕಾಸು, ಮಾನವ ಸಂಪನ್ಮೂಲ, ಫಿನ್ಟೆಕ್, ಕೃತಕ ಬುದ್ಧಿಮತ್ತೆ ಮತ್ತು ಸಲಹಾ ವಿಭಾಗಗಳಂತಹ” ಎಂ.ಬಿ.ಎ. ವಿಶೇಷಿಕರಣಗಳಿಗೆ ಹೊಂದಿಕೆಯಾಗುವ ಹುದ್ದೆಗಳನ್ನು ನೀಡಲಿವೆ.

ಉದ್ಯೋಗಾವಕಾಶ ಅಭಿಯಾನವು ಬೆಳಿಗ್ಗೆ 10:00 ಪ್ರಾರಂಭವಾಗಲಿದೆ.ಪೂರ್ವ ಪ್ಲೇಸ್ಮೆಂಟ್ ಉಪನ್ಯಾಸಗಳು, ಸಂವಹನ ಸತ್ರಗಳು, ಸಂದರ್ಶನಗಳು ಹಾಗೂ ಆಯ್ಕೆ ಪ್ರಕ್ರಿಯೆಗಳು ಕಂಪನಿ ಪ್ರತಿನಿಧಿಗಳಿಂದ ನಡೆಸಲ್ಪಡಲಿವೆ. ಈ ಉಪಕ್ರಮವು ವಿದ್ಯಾರ್ಥಿಗಳಿಗೆ ಕಾರ್ಪೊರೇಟ್ ನೇಮಕಾತಿ ಕ್ರಮಗಳ ನೇರ ಅನುಭವವನ್ನು ನೀಡುವ ಜೊತೆಗೆ, ಸಂಸ್ಥೆಗಳಿಗೆ ಉದ್ಯಮಕ್ಕೆ ಸಿದ್ಧವಾದ ನಿಪುಣ ನಿರ್ವಹಣಾ ಪದವೀಧರರನ್ನು ಆಯ್ಕೆ ಮಾಡುವ ಅವಕಾಶವನ್ನು ಕಲ್ಪಿಸುತ್ತದೆ.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಅರ್ಥಪೂರ್ಣ ಉದ್ಯೋಗಾವಕಾಶಗಳು ಹಾಗೂ ದೀರ್ಘಕಾಲೀನ ವೃತ್ತಿಪರ ಬೆಳವಣಿಗೆಯನ್ನು ಒದಗಿಸಲಿದೆ ಎಂಬ ವಿಶ್ವಾಸವನ್ನ ಅವರು ವ್ಯಕ್ತಪಡಿಸಿದರು.

ಎಂ.ಬಿ.ಎ. ವಿಭಾಗವು ಈ ಪ್ಲೇಸ್ಟೆಂಟ್ ಅಭಿಯಾನ ಯಶಸ್ವಿಯಾಗಿ ನೆರವೇರಲಿದೆ ಎಂಬ ನಿರೀಕ್ಷೆಯೊಂದಿಗೆ, ಉದ್ಯಮ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಿ ವಿದ್ಯಾರ್ಥಿಗಳ ಯಶಸ್ವಿ ವೃತ್ತಿ ಜೀವನಕ್ಕೆ ಬೆಂಬಲ ನೀಡಲು ಎದುರು ನೋಡುತ್ತಿದೆ. ಪಾಂಡೇಶ್ವರ ಕ್ಯಾಂಪಸ್- ಮಂಗಳೂರಿನಲ್ಲಿ ಈ ಅಭಿಯಾನದ ಸಂಯೋಜಕರಾಗಿ ಪ್ರೊ. ಸ್ವಾತಿ ನಾರಾಯಣ್ ಹಾಗೂ ಶ್ರೀ ರವಿ ಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಸ್ವಾತಿ ನಾರಾಯಣ್, ಶ್ರೀ ರವಿ ಕುಮಾರ್, ಕಾವ್ಯ ಶ್ರೀ ಹಾಗೂ ಬಶೀರ್ ಉಪಸ್ಥಿತರಿದ್ದರು.

