ಮಂಗಳೂರು : ಕರಾವಳಿ ಪ್ರವಾಸೋದ್ಯಮಕ್ಕೆ ತೊಡಕಾಗಿರುವ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಪರಿಹರಿಸಿ, ಹೊಸ ಹಾಗೂ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ .
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು,ಈ ನಿಟ್ಟಿನಲ್ಲಿ ಕರಾವಳಿಯ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು,ಜನಪ್ರತಿನಿಧಿಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರನ್ನು ಒಳಗೊಂಡ ಕಾರ್ಯಯೋಜನೆಯನ್ನು ರೂಪಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಕರಾವಳಿ ಪ್ರದೇಶವೆಂದರೆ ಸೌಂದರ್ಯ,ಜ್ಞಾನ ಮತ್ತು ಸಂಪತ್ತಿನ ನೆಲೆ ಎಂದು ಹೇಳಿದ ಡಿಕೆಶಿ,”ಎಷ್ಟೊಂದು ಸಾಮರ್ಥ್ಯ ಇದ್ದರೂ ಕರಾವಳಿ ಪ್ರದೇಶ ಏಕೆ ಹಿಂದುಳಿದಿದೆ ಎಂಬುದು ಅರ್ಥವಾಗುವುದಿಲ್ಲ.ಕೊಡಗು ಸೇರಿ ಸುಮಾರು 300 ಕಿಲೋಮೀಟರ್ ಉದ್ದದ ಕರಾವಳಿ ಇತಿಹಾಸವನ್ನು ನೋಡಿದರೆ,ಇಲ್ಲಿನ ಹಿರಿಯರು ರಾಷ್ಟ್ರಕ್ಕೆ ಬ್ಯಾಂಕಿಂಗ್ ವ್ಯವಸ್ಥೆ ಶಿಸ್ತು ಮತ್ತು ಶಿಕ್ಷಣದ ಪರಂಪರೆಯನ್ನು ನೀಡಿದ್ದಾರೆ.ಇದು ಶಿಕ್ಷಣದ ಹಬ್ ಆಗಿದ್ದು,ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಪಿಯು ಶಿಕ್ಷಣದ ಮೂಲಕ ಮಾನವ ಸಂಪನ್ಮೂಲವನ್ನು ಸೃಷ್ಟಿಸುತ್ತಿದೆ. ಇಂತಹ ವ್ಯವಸ್ಥೆ ರಾಜ್ಯದ ಬೇರೆ ಯಾವುದೇ ಜಿಲ್ಲೆಗಳಲ್ಲಿ ಕಾಣುವುದಿಲ್ಲ” ಎಂದರು.

ಪ್ರವಾಸೋದ್ಯಮ ಸಮಾವೇಶ 2026′ ರಲ್ಲಿ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್, ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.

