ನವದೆಹಲಿ :ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ತಮ್ಮ ದೈನಂದಿನ ಕೆಲಸದ ಸಮಯದಲ್ಲಿ ಮೊಬೈಲ್ ಫೋನ್ ಅಥವಾ ಇಂಟರ್ನೆಟ್ ಬಳಸುವುದಿಲ್ಲ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ವಿಕಸಿತ ಭಾರತ ಯುವ ನಾಯಕರ ಸಂವಾದ 2026 ರ ಉದ್ಘಾಟನಾ ಸಮಾರಂಭದಲ್ಲಿ ಅವರು ಯುವಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಈ ಕಾರ್ಯಕ್ರಮವು ಭಾರತ್ ಮಂಟಪದಲ್ಲಿ ನಡೆಯಿತು.

ಪ್ರಶ್ನೋತ್ತರ ಅವಧಿಯಲ್ಲಿ, ಒಬ್ಬರು ಅದು ನಿಜವೇ ಎಂದು ಕೇಳಿದರು? ಏಕೆಂದರೆ ನೀವು ಮೊಬೈಲ್ ಫೋನ್ ಅಥವಾ ಇಂಟರ್ನೆಟ್ ಬಳಸುವುದಿಲ್ಲ ಎಂಬ ಕೆಲವು ವರದಿಗಳನ್ನು ನಾನು ನೋಡಿದ್ದೇನೆ ಎಂದರು, ಅದಕ್ಕೆ ದೋವಲ್ ಅವರು ಮುಗುಳ್ನಗುತ್ತಾ ಅದು ನಿಜ ಎಂದು ದೃಢಪಡಿಸಿದರು. ಇಂಟರ್ನೆಟ್ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದರು ಮತ್ತು ಕುಟುಂಬ ಸದಸ್ಯರು ಅಥವಾ ಇತರ ದೇಶಗಳ ಜನರೊಂದಿಗೆ ಮಾತನಾಡುವಂತಹ ವಿಶೇಷ ಸಂದರ್ಭಗಳಲ್ಲಿ ಹೊರತುಪಡಿಸಿ ಮೊಬೈಲ್ ಫೋನ್ ಬಳಸುವುದಿಲ್ಲ ಎಂದು ಹೇಳಿದರು.ಪೋನ್ ಅವಶ್ಯಕ ಆದರೆ ನಾನು ಅದನ್ನು ಬಳಸದೆ ನನ್ನ ಕೆಲಸವನ್ನು ನಿರ್ವಹಿಸುತ್ತೇನೆ, ಫೋನ್ ಮತ್ತು ಇಂಟರ್ನೆಟ್ ಸಂವಹನ ನಡೆಸಲು ಏಕೈಕ ಮಾರ್ಗವಲ್ಲ ಮತ್ತು ಹೆಚ್ಚಿನ ಜನರಿಗೆ ತಿಳಿದಿಲ್ಲದ ಇತರ ವಿಧಾನಗಳಿವೆ ಎಂದು ದೋವಲ್ ವಿವರಿಸಿದರು.
ಅಜಿತ್ ಕುಮಾರ್ ದೋವಲ್ ಅವರು ಭಾರತದ ಪ್ರಧಾನ ಮಂತ್ರಿಯವರ ಐದನೇ ಮತ್ತು ಪ್ರಸ್ತುತ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಆಗಿದ್ದಾರೆ.ಅವರು 1945 ರಲ್ಲಿ ಉತ್ತರಾಖಂಡದಲ್ಲಿ ಜನಿಸಿದರು,ಅಜಿತ್ ದೋವಲ್ 1968 ರಲ್ಲಿ ಐಪಿಎಸ್ ಅಧಿಕಾರಿಯಾಗಿ ತಮ್ಮ ಪೊಲೀಸ್ ವೃತ್ತಿಜೀವನವನ್ನು ಪ್ರಾರಂಭಿಸಿದರು.ಮತ್ತು ತಮ್ಮ ಸೇವೆಗಾಗಿ ಕೀರ್ತಿ ಚಕ್ರ ಪ್ರಶಸ್ತಿಯನ್ನು ಪಡೆದ ಭಾರತದ ಅತ್ಯಂತ ಕಿರಿಯ ಪೊಲೀಸ್ ಅಧಿಕಾರಿಯಾಗಿದ್ದಾರೆ.

ದೋವಲ್ ಅವರು ಸೆಪ್ಟೆಂಬರ್ 2016 ರಲ್ಲಿ ಭಾರತದ ಸರ್ಜಿಕಲ್ ಸ್ಟ್ರೈಕ್ ಮತ್ತು ಫೆಬ್ರವರಿ 2019 ರಲ್ಲಿ ಪಾಕಿಸ್ತಾನದಲ್ಲಿ ನಡೆದ ಬಾಲಕೋಟ್ ವೈಮಾನಿಕ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.ಪಾಕಿಸ್ತಾನದಲ್ಲಿ ಏಳು ವರ್ಷಗಳ ಕಾಲ ರಹಸ್ಯವಾಗಿ ಕೆಲಸ ಮಾಡುತ್ತಿದ್ದರು, ಸಕ್ರಿಯ ಉಗ್ರಗಾಮಿ ಗುಂಪುಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ. ಒಂದು ವರ್ಷ ರಹಸ್ಯ ಏಜೆಂಟ್ ಆಗಿ ಕೆಲಸ ಮಾಡಿದ ನಂತರ, ಅವರು ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ನಲ್ಲಿ ಆರು ವರ್ಷಗಳ ಕಾಲ ಕೆಲಸ ಮಾಡಿದರು.

