ಮಂಗಳೂರು : ಅನುಪಮ ಮಹಿಳಾ ಮಾಸಿಕವು ತನ್ನ 25ನೇ ವರ್ಷಾಚರಣೆ ಆಚರಿಸುವ ಹೊಸ್ತಿನಲ್ಲಿದ್ದು ಈ ಪ್ರಯುಕ್ತ ಬೆಳ್ಳಿ ಹಬ್ಬವನ್ನು ಮಂಗಳೂರಿನ ಪುರಭವನದಲ್ಲಿ ಜನವರಿ 15 ರಂದು ಬೆಳಿಗ್ಗೆ 10 ರಿಂದ ಮಹಿಳೆಯರ ಬೃಹತ್ ಓದುಗರ ಸಮಾವೇಶವನ್ನಾಗಿ ಸಂಭ್ರಮಿಸಲಾಗುವುದೆಂದು ಅನುಪಮ ಪ್ರಧಾನ ಸಂಪಾದಕಿ ಶಹನಾಝ್ ಎಂ. ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,25ನೇ ವರ್ಷ ಪೂರ್ಣಗೊಳಿಸಿದ ಈ ಸುಸಂದರ್ಭದಲ್ಲಿ ಅನುಪಮ ಬಳಗವು ವಿಶೇಷಾಂಕವೊಂದನ್ನು ಹೊರ ತಂದಿದ್ದು. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಮ್ಮ ಕಾವೇರಿ ನಿವಾಸದಲ್ಲಿ ಈಗಾಗಲೇ ಬಿಡುಗಡೆಗೊಳಿಸಿದ್ದಾರೆ ಎಂದರು.
ಜನವರಿ.15ರಂದು ಪುರಭವನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಈ ವಿಶೇಷ ಸಂಚಿಕೆಯನ್ನು ಮತ್ತು ಬೆಳ್ಳಿ ಹಬ್ಬದ ಸಂಭ್ರಮವನ್ನು ಖ್ಯಾತ ಸಾಹಿತಿಗಳಾದ ಶ್ರೀಮತಿ ಡಾ|ಕೆ. ಶರೀಫಾ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ, ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ , ACP ನಜ್ಮಾ ಫಾರೂಕಿ, ಕರಾವಳಿ ಲೇಖಕಿ-ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಶೆಟ್ಟಿ, ಬೆಥನಿ ಸೈಂಟ್ ತೆರೇಸಾ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಲೂಡ್ಸ್, ಅಂತರಾಷ್ಟ್ರೀಯ ಕಬಡ್ಡಿ ಅಟಗಾರ್ತಿ ಧನಲಕ್ಷ್ಮಿ, ಆಪ್ತ ಸಮಾಲೋಚಕಿ ಡಾ.ರುಕ್ಸಾನ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ, ಈ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರಿಗೆ ಸನ್ಮಾನ ಕೂಡ ನಡೆಯಲಿದೆ ಎಂದರು.

ಅನುಪಮವು ಇಂದು ಮುಂದು ಮಹಿಳೆಯರ ಧ್ವನಿಯಾಗಿ,ಅವರ ಬರವಣಿಗೆಯ ಕೌಶಲ್ಯದ ವೇದಿಕೆಯಾಗಿ,ಅವರನ್ನು ಮುಖ್ಯ ವೇದಿಕೆಯಲ್ಲಿ ತರಲು ಸಮಾಜದಲ್ಲಿ ಪ್ರಯತ್ನಿಸುವ ಮಾಸಿಕ ಪತ್ರಿಕೆಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪ ಸಂಪಾದಕಿ ಸಬೀಹಾ ಫಾತಿಮಾ,ಕರಾವಳಿ ಲೇಖಕಿ-ವಾಚಕಿಯರ ಸಂಘದ ಸದಸ್ಯೆ ಲೇಖಕಿ ಸುಖಾಲಾಕ್ಷಿ, ಹಿದಾಯ ಫೌಂಡೇಶನ್ ಅಧ್ಯಕ್ಷೆ ಖುರ್ಷಿದಾ , ಸಾಮಾಜಿಕ ಕಾರ್ಯಕರ್ತೆ ಹರಿಣಿ ಕೆ.ಮತ್ತಿತ್ತರು ಉಪಸ್ಥಿತರಿದ್ದರು .

