ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ‘ ಆಪರೇಷನ್ ಗ್ಯಾಂಗ್ ಬಸ್ಟ್’ ಅಡಿಯಲ್ಲಿ ದೆಹಲಿ ಪೊಲೀಸರು ಗ್ಯಾಂಗ್ಗಳು ಮತ್ತು ಸಂಘಟಿತ ಅಪರಾಧಿಗಳ ವಿರುದ್ಧ 48 ಗಂಟೆಗಳ ಕಾಲ ತೀವ್ರ ಕಾರ್ಯಾಚರಣೆ ನಡೆಸಿ 500 ಕ್ಕೂ ಹೆಚ್ಚು ಅಪರಾಧಿಗಳನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ಪ್ರಮುಖ ಮತ್ತು ಸಣ್ಣ ಗ್ಯಾಂಗ್ಗಳಿಗೆ ಸೇರಿದ ಸುಮಾರು 6,400ಹೆಚ್ಚು ಶಂಕಿತರನ್ನು ಪರಿಶೀಲನೆ ಮತ್ತು ವಿಚಾರಣೆ ನಡೆಸಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ (ಸಿಪಿ) ಪ್ರಮೋದ್ ಕುಶ್ವಾಹ ಅವರ ಪ್ರಕಾರ ಕಾರ್ಯಾಚರಣೆಯ ಭಾಗವಾಗಿ ಸುಮಾರು 9000 ಕ್ಕೂ ಮಿಕ್ಕಿ ಪೋಲಿಸರನ್ನು ನಿಯೋಜಿಸಲಾಗಿತ್ತು ದೆಹಲಿ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಇತರ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿಗಳನ್ನು ನಡೆಸಲಾಯಿತು,

ಸುಮಾರು 4,300 ಸ್ಥಳಗಳಲ್ಲಿ ನಡೆದ ದಾಳಿಗಳಲ್ಲಿ 690 ಹೊಸ ಪ್ರಕರಣಗಳು ಪತ್ತೆಯಾಗಿದ್ದು,300 ಬಂದೂಕುಗಳು ,130 ಮದ್ದುಗುಂಡುಗಳು ಮತ್ತು ಒಟ್ಟು 25 ಲಕ್ಷ ರೂ. ಸೇರಿದಂತೆ ಅಮೂಲ್ಯವಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ

ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸರು ಡಾನ್ ಗಳು,ಗ್ಯಾಂಗ್ ಸದಸ್ಯರು ಮತ್ತು ಅವರ ಸಹಚರರ ಗುರುತಿಸಲಾದ ಹಾಟ್ಸ್ಪಾಟ್ಗಳು ಮತ್ತು ಅಡಗುತಾಣಗಳ ಮೇಲೆ ದಾಳಿ ನಡೆಸಿ ಬಂಧಿಸಲಾಯಿತು, ಅಲ್ಲದೆ ಕೊಲೆ, ಕೊಲೆಯತ್ನ, ಸುಲಿಗೆ, ದರೋಡೆ ಮತ್ತು ಶಸ್ತ್ರಾಸ್ತ್ರ ಅಪರಾಧಗಳ ಪ್ರಕರಣಗಳಲ್ಲಿ ಬೇಕಾಗಿರುವ ಹಲವಾರು ಅಪರಾಧಿಗಳು ಮತ್ತು ಪರಾರಿಯಾಗಿರುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

