ಧಾರವಾಡ : ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ-ಪ್ರೌಢ ಶಾಲಾ ವಿದ್ಯಾರ್ಥಿಗಳು ಮೊಟ್ಟೆ ಸಹಿತ ಪೌಷ್ಠಿಕ ಆಹಾರವನ್ನು ಒಳಗೊಂಡ ಶುಚಿ-ರುಚಿಯಾದ ಬಿಸಿಯೂಟ ಸೇವಿಸುವಂತೆ ಅಕ್ಷರ ದಾಸೋಹದ ಅಧಿಕಾರಿಗಳು ತೀವ್ರ ಗಮನ ನೀಡಬೇಕೆಂದು ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅವರು ಮಂಗಳವಾರ ನಗರದ ಶಿಕ್ಷಕಿಯರ ಸರಕಾರಿ ತರಬೇತಿ ವಿದ್ಯಾಲಯದ ಸಭಾಭವನದಲ್ಲಿ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ 9 ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಅಭಿಯಾನ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಖಾಸಗಿ ಸ್ವಾಮ್ಯದ ಸಂಸ್ಥೆಗಳು ಸಿದ್ಧ ಬಿಸಿಯೂಟವನ್ನು ಶಾಲೆಗಳಿಗೆ ಪೂರೈಕೆ ಮಾಡುತ್ತಿದ್ದು, ಇತರೇ ಕಡೆಗಳಲ್ಲಿ ಶಾಲೆಗಳಲ್ಲಿಯೇ ಬಿಸಿಯೂಟ ತಯಾರಿಸಲಾಗುತ್ತಿದೆ. ಅಧಿಕಾರಿಗಳು ಎಲ್ಲಾ ಶಾಲೆಗಳನ್ನು ಸಂದರ್ಶಿಸಿ ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟವನ್ನು ಖುದ್ದಾಗಿ ಸೇವಿಸಿ ಅದರ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದರು.

ಶುಚಿತ್ವಕ್ಕೆ ಆದ್ಯತೆ ಅಗತ್ಯ : ಶಾಲೆಗಳಲ್ಲಿ ಬಿಸಿಯೂಟ ಸಿದ್ಧಪಡಿಸುವಲ್ಲಿ ಮತ್ತು ವಿತರಣೆಯಲ್ಲಿ, ಜೊತೆಗೆ ಆಹಾರ ಧಾನ್ಯಗಳ ಸಂಗ್ರಹದ ವಿಚಾರದಲ್ಲಿ ಎಲ್ಲಿಯೂ ಹುಳಗಳು ಕಾಣಿಸಿಕೊಳ್ಳದಂತೆ ವ್ಯಾಪಕ ಶುಚಿತ್ವಕ್ಕೆ ಆದ್ಯತೆ ನೀಡುವ ಅಗತ್ಯವಿದೆ. ನಿತ್ಯದ ಪ್ರಾರ್ಥನಾ ಸಮಯದಲ್ಲಿ ‘ಊಟಕ್ಕೂ ಮುನ್ನ ಎಲ್ಲಾ ವಿದ್ಯಾರ್ಥಿಗಳು ಸ್ವಚ್ಛವಾಗಿ ಕೈತೊಳೆದುಕೊಳ್ಳಬೇಕು’ ಎಂಬ ಸಾಮೂಹಿಕ ಸಂದೇಶವನ್ನು ಬಿತ್ತರಿಸಬೇಕು. ಬಿಸಿಯೂಟ ವಿತರಣೆಯ ಮೂಲಕ ವಿದ್ಯಾರ್ಥಿಗಳ ದೈಹಿಕ ಆರೋಗ್ಯ ವರ್ಧನೆಯಾಗಬೇಕೇ ವಿನಃ ಎಲ್ಲಿಯೂ ಶಾಲಾ ಮಕ್ಕಳಿಗೆ ಆರೋಗ್ಯದ ಹಿನ್ನೆಡೆಯಾಗದಂತೆ ಇಲಾಖೆಯ ಎಲ್ಲಾ ಭಾಗೀದಾರರು ಎಚ್ಚರಿಕೆವಹಿಸಬೇಕು ಎಂದೂ ಅವರು ಹೇಳಿದರು.
ಮೊಟ್ಟೆ ವಿತರಣೆ : ವಾರದ ಆರೂ ದಿನಗಳಂದು ನಿತ್ಯವೂ ಶಾಲಾ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರವಾಗಿ ಕುದಿಸಿದ ಮೊಟ್ಟೆಯನ್ನು ನೀಡಲಾಗುತ್ತಿದ್ದು, ಈ ಮೊಟ್ಟೆ ವಿತರಣೆಯ ವೆಚ್ಚ ಭರಿಸಲು ನೀಡಲಾಗುವ ವಿಶೇಷ ಅನುದಾನದ ಹಣಕಾಸು ನಿರ್ವಹಣೆ ನಿಯಮಾನುಸಾರ ನಿಖರ ನೆಲೆಯಲ್ಲಿ ನಡೆದಿರುವ ಕುರಿತು ಅಧಿಕಾರಿಗಳು ಪರಿಶೀಲಿಸಬೇಕು ಎಂದೂ ಡಾ.ಈಶ್ವರ ಉಳ್ಳಾಗಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಆಯುಕ್ತರ ಕಚೇರಿಯ ನಿರ್ದೇಶಕ ಈಶ್ವರ ನಾಯಕ, ಜಂಟಿ ನಿರ್ದೇಶಕಿ ಜಯಶ್ರೀ ಕಾರೇಕರ, ಉಪನಿರ್ದೇಶಕ ಗಿರೀಶ ಪದಕಿ, ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ವಿಜಯಪೂರ, ಬಾಗಲಕೋಟ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ, ಶಿರಸಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಅಕ್ಷರ ದಾಸೋಹದ ಜಿಲ್ಲಾ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಸಹಾಯಕ ನಿರ್ದೇಶಕರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

