ಉತ್ತರ ಪ್ರದೇಶ : ಬಿಜ್ನೋರ್ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಾಯಿಯೊಂದು ದೇವಸ್ಥಾನದೊಳಗೆ ಹನುಮಾನ್ ಮತ್ತು ಮಾ ದುರ್ಗಾ ದೇವರ ವಿಗ್ರಹಗಳನ್ನು ನಿರಂತರವಾಗಿ ಸುತ್ತುತ್ತಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.
ನಾಯಿಯು ಹಲವಾರು ಗಂಟೆಗಳ ಕಾಲ ನಿರಂತರವಾಗಿ ವಿಗ್ರಹಕ್ಕೆ ಪ್ರದಕ್ಷಿಣೆ ನಡೆಸುತ್ತಿರುವ ದೃಶ್ಯವು ಸ್ಥಳೀಯರನ್ನು ಆಶ್ಚರ್ಯಚಕಿತಗೊಳಿಸಿದೆ ಪ್ರತ್ಯಕ್ಷದರ್ಶಿಗಳ ಪ್ರಕಾರ, ನಾಯಿ ಮೊದಲ ಮೂರು ದಿನಗಳ ಕಾಲ ಹನುಮಂತನ ವಿಗ್ರಹವನ್ನು ಸುತ್ತುತ್ತಿತ್ತು.ಬುಧವಾರ ಅದು ಮಾ ದುರ್ಗಾ ಮಾತೆಯ ವಿಗ್ರಹವನ್ನು ಸುತ್ತಲು ಪ್ರಾರಂಭಿಸಿತು. ನಾಯಿ ಯಾವುದೇ ಆಹಾರವನ್ನು ಸೇವಿಸದೆ, ನೀರನ್ನೂ ಕುಡಿಯದೆ ನಿರಂತರವಾಗಿ ವಿಗ್ರಹವನ್ನು ಸುತ್ತುತ್ತಿದೆ. ಸುಸ್ತಾದಾಗ, ಅದು ನಡೆಯುವಾಗ ಒಂದು ಕಾಲು ಎತ್ತುವುದು ಕಂಡುಬರುತ್ತದೆ ಎಂದರು.

ಈ ಘಟನೆ ಉತ್ತರ ಪ್ರದೇಶದ ನಾಗಿನಾ ಬಾದಾಪುರ ರಸ್ತೆಯಲ್ಲಿರುವ ನಂದಪುರ ಗ್ರಾಮದಲ್ಲಿರುವ 200 ವರ್ಷ ಪುರಾತನ ಹನುಮಾನ್ ದೇವಾಲಯದಲ್ಲಿ ನಡೆದಿದೆ. ಭಕ್ತರು ಮತ್ತು ನೋಡುಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕೆಲವರು ಇದನ್ನು ಪವಾಡ ಎಂದು ಕರೆಯುತ್ತಿದ್ದರೆ, ಇನ್ನು ಕೆಲವರು ನಾಯಿಯನ್ನು ಭಕ್ತ ಎಂದು ನಂಬುತ್ತಾರೆ. ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಪಶುವೈದ್ಯಕೀಯ ತಂಡವು ನಾಯಿಯನ್ನು ಪರೀಕ್ಷಿಸಿ, ತಕ್ಷಣದ ಆರೋಗ್ಯ ಸಮಸ್ಯೆಗಳಿಲ್ಲ ಎಂದು ಧ್ರಡಪಡಿಸಿದ್ದಾರೆ. ಆದರೆ ನಾಯಿ ಆಹಾರ ಸೇವಿಸದೆ ನಿರಂತರವಾಗಿ ವಿಗ್ರಹಗಳ ಸುತ್ತಲೂ ಸುತ್ತುತ್ತಲೇ ಇದೆ.ಪಶುವೈದ್ಯ ಡಾ. ಪಿ.ಎನ್. ಸಿಂಗ್ ಈ ಘಟನೆಯನ್ನು ಪವಾಡ ಎಂದು ಕರೆಯಬಾರದು ಎಂದು ಹೇಳಿದರು. ನಾಯಿಗಳು ಕೆಲವೊಮ್ಮೆ ವರ್ತನೆಯ ಅಥವಾ ಮಾನಸಿಕ ಸಮಸ್ಯೆಗಳನ್ನು ಬೆಳೆಸಿಕೊಳ್ಳಬಹುದು, ಇದು ಪುನರಾವರ್ತಿತ, ಗೀಳಿನ ಕ್ರಿಯೆಗಳಿಗೆ ಕಾರಣವಾಗಬಹುದು ಎಂದು ಅವರು ವಿವರಿಸಿದರು.

ಈ ಘಟನೆಯನ್ನು ಭಕ್ತನೊಬ್ಬ ಮೊಬೈಲ್ ಫೋನ್ನಲ್ಲಿ ಸೆರೆಹಿಡಿದಿದ್ದಾನೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸುದ್ದಿ ಸುತ್ತಮುತ್ತಲಿನ ಪ್ರದೇಶದಾದ್ಯಂತ ವೇಗವಾಗಿ ಹರಡಿತು. ದೇವಾಲಯ ಸಂಕೀರ್ಣದಲ್ಲಿ ಜನರು ಗುಂಪುಗೂಡಲು ಪ್ರಾರಂಭಿಸಿದರು.ಈ ಅದ್ಭುತ ದೃಶ್ಯವನ್ನು ವೀಕ್ಷಿಸಲು ಹತ್ತಿರದ ಹಳ್ಳಿಗಳಿಂದ ಮತ್ತು ದೂರದ ಪ್ರದೇಶಗಳಿಂದಲೂ ಜನರು ನಂದಪುರ ಗ್ರಾಮಕ್ಕೆ ಬರಲು ಪ್ರಾರಂಭಿಸಿದರು
ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ದೇವಾಲಯದ ಆವರಣವನ್ನು ಪರಿಶೀಲಿಸಿ ಗ್ರಾಮಸ್ಥರಿಂದ ಘಟನೆಯ ಬಗ್ಗೆ ವಿಚಾರಿಸಿದರು.ಅಲ್ಲದೆ ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮತ್ತು ಯಾವುದೇ ವದಂತಿಗಳಿಗೆ ಅವಕಾಶ ನೀಡದಂತೆ ಮನವಿ ಮಾಡಿದರು.

