ಮುಂಬೈ : ಭಾರತದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಮುನ್ಸಿಪಲ್ ಕಾರ್ಪೋರೇಷನ್ ಎಂದು ಪರಿಗಣಿಸಲ್ಪಡುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಎಲ್ಲಾ ಚುನಾವಣೆ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿದೆ.
ಕಳೆದ 25 ವರ್ಷಗಳಿಂದ ಕಾಲ ಉದ್ಧವ್ ಠಾಕ್ರೆಯ ಭದ್ರಕೋಟೆಯಾಗಿದ್ದ ಬಿಎಂಸಿ ಈ ಬಾರಿ ಅವರ ಕೈತಪ್ಪಿದೆ. ಚುನಾವಣೆಯಲ್ಲಿ ಠಾಕ್ರೆ ಸೋದರರಿಗೆ ಹೀನಾಯ ಸೋಲಿನಿಂದ ತೀವ್ರ ಮುಖಭಂಗವಾಗಿದೆ. ಬಿಜೆಪಿ-ಶಿವಸೇನೆ ಮೈತ್ರಿಯ ಮಹಾಯುತಿ ಭಾರೀ ಗೆಲುವು ಕಾಣುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಭಾರತದ ಅರ್ಥಿಕ ರಾಜಧಾನಿಯಾಗಿರುವ ಮುಂಬೈ ವಾರ್ಷಿಕ ಬಜೆಟ್ 74,400 ಕೋಟಿ ರೂ. ಮೀರಿರುವ ಬಿಎಂಸಿ ಚುನಾವಣೆಯಲ್ಲಿ 227 ಸ್ಥಾನಗಳಿಗೆ 1,700 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಕಳೆದ 2017ರಲ್ಲಿ ನಡೆದ ಕೊನೆಯ ಚುನಾವಣೆಯಲ್ಲಿ, ಮಾಜಿ ಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ಒಂದಾಗಿದ್ದ ಸಂಯುಕ್ತ ಶಿವಸೇನೆ ದಶಕಗಳಿಂದ ನಿಯಂತ್ರಿಸುತ್ತಿದ್ದ ಬಿಎಂಸಿಯ ಮೇಲೆ ತನ್ನ ಹಿಡಿತವನ್ನು ಉಳಿಸಿಕೊಂಡಿತ್ತು. ಈ ಬಾರಿಯ 2026 ರ ಚುನಾವಣೆಯಲ್ಲಿ ಅವರಿಬ್ಬರೂ ಬೇರ್ಪಟ್ಟು ಬೇರೆ ಬೇರೆಯಾಗಿ ಅಖಾಡಕ್ಕಿಳಿದಿದ್ದರು.
ಮುಂಬೈ ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ 88 ಸ್ಥಾನ ಮತ್ತು ಶಿಂಧೆ ಬಣ 28 ಸ್ಥಾನಗಳನ್ನು ಗೆದ್ದು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮುಂಬೈ ಬಿಜೆಪಿ ಮುಖ್ಯ ವಕ್ತಾರ ನಿರಂಜನ್ ಶೆಟ್ಟಿ ‘ರಸಮಲೈ’ ವಿತರಿಸಿದರು, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ನಾಯಕ ಅಣ್ಣಾಮಲೈ ಅವರನ್ನು ಅಣಕಿಸಲು ರಾಜ್ ಠಾಕ್ರೆ ರಸಮಲೈ ಎಂಬ ಪದವನ್ನು ಬಳಸಿದ್ದಕ್ಕಾಗಿ ಮುಂಬೈ ಬಿಜೆಪಿ ಮುಖ್ಯ ವಕ್ತಾರ ನಿರಂಜನ್ ಶೆಟ್ಟಿ ಮತ್ತು ಪಕ್ಷದ ಕಾರ್ಯಕರ್ತರು ಸಹ ರಸಮಲೈ ವಿತರಿಸುವ ಮೂಲಕ ಬಿಜೆಪಿಯ ವಿಜಯವನ್ನು ಆಚರಿಸಿದರು.

